ನಗರದ ತ್ಯಾಜ್ಯ ನಿರ್ವಹಣೆಗೆ ನಿಯೋಜಿಸಿದ ಕಂಪೆನಿಗೆ ಕೋಟ್ಯಂತರ ಹಣ ಪಾವತಿ ಬಾಕಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರಿಗರ ಜೀವನ ಗುಣಮಟ್ಟಕ್ಕಾಗಿ ನಗರವನ್ನು ದೇಶದ ಅತ್ಯುತ್ತಮ ನಗರಗಳಲ್ಲಿ ಒಂದು ಎಂದು ಗುರುತಿಸಲಾಗಿದೆ, ಆದರೆ ನಗರದ ಇನ್ನೊಂದು ಮುಖ ಬೇರೆನೇ ಇದೆ. ಹೌದು, ನಗರವನ್ನು ಶುಚಿಯಾಗಿಡಲು ನಗರದ ಮೂಲೆಮೂಲೆಗಳಿಂದ ತ್ಯಾಜ್ಯ ವಿಲೇವಾರಿ ಮಾಡಲು ನಿಯೋಜಿಸಲಾಗಿರುವ ಕಂಪೆನಿಗೆ ಮಂಗಳೂರು ಮಹಾನಗರ ಪಾಲಿಕೆ ಕೋಟ್ಯಂತರ ರೂಪಾಯಿಗಳ ಬೃಹತ್ ಮೊತ್ತವನ್ನು ಪಾವತಿಸದೆ ಬಾಕಿಯಿರಿಸಿದೆ.

ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಆಂಟೊನಿ ತ್ಯಾಜ್ಯ ನಿರ್ವಹಣಾ ಕೇಂದ್ರ ಖಾಸಗಿ ನಿಯಮಿತಕ್ಕೆ ಮನಪಾ ಸುಮಾರು ಹಣ ಪಾವತಿಸದೆ ಬಾಕಿಯಿರಿಸಿದೆ. ಹೀಗೆ ಮಾಡಿರುವುದರಿಂದ ನಗರದ ಹಲವು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ತ್ಯಾಜ್ಯ ವಿಲೇವಾರಿಯಾಗದೆ ಉಳಿದಿದೆ. ಆಂಟೋನಿ ತ್ಯಾಜ್ಯ ನಿರ್ವಹಣಾ ಕಂಪೆನಿ ಕೆಲಸಗಾರರ ಮುಷ್ಕರವನ್ನು ಬಗೆಹರಿಸಿದೆ. ಆದರೆ ನಗರ ಪಾಲಿಕೆ ಇದುವರೆಗೆ ಕಂಪೆನಿಯ ಬಾಕಿ ಮೊತ್ತವನ್ನು ಪಾವತಿಸಿಲ್ಲ.

“ಆಗಸ್ಟ್ 16ರಂದು ಕೆಲಸಗಾರರು ಮುಷ್ಕರ ನಡೆಸಿದ್ದರಿಂದಾಗಿ ತ್ಯಾಜ್ಯ ಸಂಗ್ರಹ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದೆ. ಹಾಗಿದ್ದರೂ ತ್ಯಾಜ್ಯ ನಿರ್ವಹಣಾ ಪ್ರಕ್ರಿಯೆ ಸಹಜ ಸ್ಥಿತಿಗೆ ಬರುತ್ತಾ ಇದೆ” ಎಂದು ಎಡಬ್ಲ್ಯುಎಚ್ಸಿಪಿಎಲ್ ಹಣಕಾಸು ಮುಖ್ಯಸ್ಥ ಪ್ರಕಾಶ್ ಕುರೂಪ್ ಹೇಳಿದ್ದಾರೆ.