ಉಪಚುನಾವಣೆಯಲ್ಲಿ ಮೋದಿ ಸಾಧನೆ ಪ್ರಚಾರ ಮಾಡದೆ ಸೋಲು

ಯಡ್ಡಿ ವಿರುದ್ಧ ಹೈಕಮಾಂಡಿಗೆ ದೂರು

ನವದೆಹಲಿ : “ನಂಜುಗೂಡು ಮತ್ತು ಗುಂಡ್ಲುಪೇಟೆ ಉಪ-ಚುನಾವಣೆ ವೇಳೆ ಪ್ರಧಾನಿ ಮೋದಿಯ `ಉತ್ತಮ ಕೆಲಸ’ದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಪ್ರಚಾರ ನಡೆಸಿಲ್ಲ. ಆದ್ದರಿಂದ ಬಿಜೆಪಿಗೆ ಹೀನಾಯ ಸೋಲಾಯಿತು” ಎಂದು ಪಕ್ಷದಲ್ಲಿನ ಯಡ್ಡಿ ವಿರೋಧಿಗಳು ದೂರಿದ್ದಾರೆ.

ಯಡ್ಡಿಯೂರಪ್ಪರ ಕಾರ್ಯವೈಖರಿ ವಿರೋಧಿಸುತ್ತಿರುವ ಬಿಜೆಪಿಯ ಕೆಲವು ನಾಯಕರು, ಅವರು ತನ್ನ ಆಪ್ತರಾದ ಶೋಭಾ ಕರಂದ್ಲಾಜೆ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹಗೆ ಮಾತ್ರ ಮಣೆ ಹಾಕಿದ್ದರು ಎಂದು ಕೇಂದ್ರೀಯ ನಾಯಕತ್ವಕ್ಕೆ ದೂರು ನೀಡಿದ್ದಾರೆ.

“ನೋಟು ಅಪಮೌಲ್ಯೀಕರಣ, ಮುದ್ರಾ ಯೋಜನೆ, ಉಚಿತ ಎಲ್‍ಪಿಜಿ ಸಂಪರ್ಕ, ಗ್ರಾಮೀಣ ವಿದ್ಯುತ್ತೀಕರಣ ಮತ್ತು ಬಡವರ ಪರ ಪ್ರಧಾನಿ ಜಾರಿಗೊಳಿಸಿರುವ ಉತ್ತಮ ಯೋಜನೆಗಳ ಬಗ್ಗೆ ಪ್ರಚಾರದ ವೇಳೆ ಯಡಿಯೂರಪ್ಪ ಚಕಾರ ಎತ್ತಿಲ್ಲ” ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದರು. ಚುನಾವಣಾ ಪ್ರಚಾರವು ಬರೇ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪರ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು ಎಂದವರು ಹೈಕಮಾಂಡಿಗೆ ದೂರಿಕೊಂಡಿದ್ದಾರೆ.

ಎಲ್ಲ ಕಡೆ ಯಡ್ಡಿಯೊಂದಿಗೆ ಶೋಭಾ ಕಾಣಿಸಿಕೊಂಡಿದ್ದಾರೆ. ಅವರು ಬಿಜೆಪಿಯ ಇತರ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.