ಟೀವಿ ಒಡೆದರು, ಪೋಸ್ಟರ್ ಹರಿದರು, ರಸ್ತೆಯಲ್ಲಿ ಅತ್ತರು

ಭಾರತ ಗೆದ್ದರೆ ವಿಜಯೋತ್ಸವ ಆಚರಿಸುವುದು ಪಾಕಿಸ್ತಾನ ಗೆದ್ದರೆ ಆಕ್ರೋಶಭರಿತರಾಗಿ ತಮ್ಮ ಕ್ರೋಧ ವ್ಯಕ್ತಪಡಿಸುವುದು ಕ್ರಿಕೆಟ್ ಅಭಿಮಾನಿಗಳ ಉನ್ಮಾದದ ಸಂಕೇತ.

ಭಾರತ ಪಾಕಿಸ್ತಾನದ ಕ್ರಿಕೆಟ್ ಪಂದ್ಯದ ವೈಶಿಷ್ಟ್ಯವೆಂದರೆ ಮೈದಾನದಲ್ಲಿ ಆಟಗಾರರು ಸ್ಪೂರ್ತಿದಾಯಕವಾಗಿ ಆಡುತ್ತಿದ್ದರೆ ಇತ್ತ ಭಾರತದ ಗಲ್ಲಿಗಲ್ಲಿಗಳಲ್ಲಿ ಉನ್ಮಾದದ ಹೊಳೆ ಹರಿಯುತ್ತಿರುತ್ತದೆ. ಭಾರತ ಗೆದ್ದರೆ ವಿಜಯೋತ್ಸವ ಆಚರಿಸುವುದು ಪಾಕಿಸ್ತಾನ ಗೆದ್ದರೆ ಆಕ್ರೋಶಭರಿತರಾಗಿ ತಮ್ಮ ಕ್ರೋಧ ವ್ಯಕ್ತಪಡಿಸುವುದು ಅಭಿಮಾನಿಗಳ ಉನ್ಮಾದದ ಸಂಕೇತ.

ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕ್ ತಂಡ ಭಾರತದ ವಿರುದ್ಧ ಗೆದ್ದ ನಂತರ ಅಭಿಮಾನಿಗಳು ರಸ್ತೆಗಿಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ 338 ರನ್ನಿಗೆ ಪ್ರತಿಯಾಗಿ ಭಾರತ 158 ರನ್ನುಗಳಿಗೆ ಆಲೌಟ್ ಆಗಿ ಪಂದ್ಯ ಸೋತಿದೆ.

ಕೆಲವು ಉನ್ಮತ್ತ ಅಭಿಮಾನಿಗಳು ಭಾರತದ ಆಟಗಾರರ ಚಿತ್ರವಿದ್ದ ಪೋಸ್ಟರುಗಳನ್ನು ಹರಿದುಹಾಕಿದರೆ ಇನ್ನು ಕೆಲವರು ಟೀವಿಗಳನ್ನೇ ಒಡೆದುಹಾಕಿದ್ದಾರೆ. ಇನ್ನೂ ಕೆಲವೆಡೆ ಅಭಿಮಾನಿಗಳು ರಸ್ತೆಗಿಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನ್ಪುರದಲ್ಲಿ ವಿರಾಟ್ ಕೊಹ್ಲಿ, ಅಶ್ವಿನ್, ಯುವರಾಜ್ ಮತ್ತಿತರ ಆಟಗಾರರ ಭಾವಚಿತ್ರಗಳಿದ್ದ ಪೋಸ್ಟರುಗಳನ್ನು ಹರಿದುಹಾಕಲಾಗಿದೆ. ಉತ್ತರಖಂಡದ ಹರಿದ್ವಾರದಲ್ಲಿ ಅನೇಕರು ತಮ್ಮ ಟೀವಿಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ರಾಂಚಿಯಲ್ಲಿ ಮಹೇಂದ್ರ ಸಿಂಗ್ ಧೋನಿಯ ಮನೆಗೆ ರಕ್ಷಣೆ ನೀಡಲಾಗಿದ್ದು, ಯಾವುದೇ ಅಪಾಯ ಸಂಭವಿಸದಂತೆ ಎಚ್ಚರ ವಹಿಸಲಾಗಿದೆ.

ಮತ್ತೊಂದೆಡೆ ಪಾಕಿಸ್ತಾನದ ವಿಜಯವನ್ನು ವಿಜೃಂಭಣೆಯಿಂದ ಆಚರಿಸಿರುವ ಕಾಶ್ಮೀರದ ಕೆಲವು ಯುವಕರು ಸಂಭ್ರಮಾಚರಣೆ ನಡೆಸಿದ್ದಾರೆ. ಫರಾಕಡಲ್ ಮತ್ತು ಸೆಕಿದಫರ್ ಪ್ರದೇಶಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಕೆಲವೆಡೆ ಮಹಿಳೆಯರೂ ಸಹ ಪಾಕಿಸ್ತಾನದ ವಿಜಯವನ್ನು ಕೊಂಡಾಡಿ ಸಂಭ್ರಮಾಚರಣೆ ನಡೆಸಿದ್ದಾರೆ. ಕೆಲವು ಯುವಕರು ಸಿ ಆರ್ ಪಿ ಎಫ್ ಕ್ಯಾಂಪುಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ಸಂಭ್ರಮ ಅಚರಿಸಿದ್ದಾರೆ. ಪಟಾಕಿ ಲಭ್ಯವಿಲ್ಲದೆಡೆ ಕೆಲವು ಯುವಕರು ಡ್ರಂ ಬಾರಿಸುವ ಮೂಲಕ ತಮ್ಮ ಸಂಭ್ರಮ ವ್ಯಕ್ತಪಡಿಸಿದ್ದಾರೆ.