ವಾಹನ ತಡೆದು ಗ್ರಾಮಸ್ಥರ ಪ್ರತಿಭಟನೆ

ವಾಹನ ತಡೆದು ಪ್ರತಿಭಟಿಸಿದ ಗ್ರಾಮಸ್ಥರು

ಅಧಿಕ ಬಾರದ ಟಿಪ್ಪರ್ ಸಂಚಾರದಿಂದ ಅಬ್ಬೇಡಿಯ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಟಿಪ್ಪರುಗಳಲ್ಲಿ ಕ್ಯಾಬಿನಿಗಿಂತಲೂ ಎತ್ತರವಾಗಿ ಮಣ್ಣು ತುಂಬಿಸಿ ಎರ್ರಾಬಿರ್ರಿ ಸಂಚರಿಸುತ್ತಿದ್ದ ಟಿಪ್ಪರುಗಳ ಭಾರಕ್ಕೆ ಅಬ್ಬೇಡಿ ದೈವಸ್ಥಾನದ ಬಳಿಯ ಕಾಂಕ್ರೀಟ್ ರಸ್ತೆ ಕುಸಿಯುತ್ತಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಟಿಪ್ಪರುಗಳಿಗೆ ತಡೆಯೊಡ್ಡಿದರು.

ಟಿಪ್ಪರ್ ಆರ್ಭಟಕ್ಕೆ ಕುಸಿದ ಅಬ್ಬೇಡಿ ಕಾಂಕ್ರೀಟ್ ರಸ್ತ
ಟಿಪ್ಪರ್ ಆರ್ಭಟಕ್ಕೆ ಕುಸಿದ ಅಬ್ಬೇಡಿ ಕಾಂಕ್ರೀಟ್ ರಸ್ತ

ಸಂಪರ್ಕ ರಸ್ತೆಯೇ ಇಲ್ಲದ ಈ ಭಾಗಕ್ಕೆ ನಾಲ್ಕು ವರ್ಷಗಳ ಹಿಂದೆ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ರಸ್ತೆಯಿಂದ ಜನ ಬಲು ಸಂತುಷ್ಟರಾಗಿದ್ದರು. ಆದರೆ ಪಡುಬಿದ್ರಿ ಗ್ರಾ ಪಂ ಈ ಭಾಗದಲ್ಲಿ ಚರಂಡಿ ವ್ಯವಸ್ಥೆಯಾಗಲೀ, ಜಂಗಲ್ ಕಟ್ಟಿಂಗ್ ಆಗಲಿ ನಡೆಸದಿರುವುದರಿಂದ ನಿರ್ವಹಣೆರಹಿತವಾಗಿದ್ದರಿಂದ ಈ ಭಾಗದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಈ ಬಗ್ಗೆ ಗ್ರಾ ಪಂ ಭರವಸೆ ನೀಡಿತ್ತಾದರೂ ಅದನ್ನು ಈಡೇರಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಈ ಸಮಸ್ಯೆಯಿಂದಲೇ ಜನರು ಒದ್ದಾಟ ನಡೆಸುತ್ತಿದ್ದಾಗ ಸ್ಥಳೀಯ ಜಾಗವೊಂದನ್ನು ಹಣಕೊಟ್ಟು ಪಡೆದ ವ್ಯಕ್ತಿಯೊಬ್ಬರು, ಅದನ್ನು ಎತ್ತರಗೊಳಿಸುವುದಕ್ಕಾಗಿ ಟಿಪ್ಪರುಗಳಲ್ಲಿ ಮಣ್ಣು ಸಾಗಿಸುತ್ತಿದ್ದರು. ಅಧಿಕ ಭಾರದ ಟಿಪ್ಪರ್ ಸಂಚಾರದಿಂದ ಕಾಂಕ್ರೀಟ್ ರಸ್ತೆ ಬಿರುಕುಬಿಟ್ಟು ಕುಸಿದಿದ್ದು, ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಎರಡು ದಿನಗಳ ಹಿಂದೆ ಟಿಪ್ಪರೊಂದನ್ನು ತಡೆದು ಅಧಿಕ ಮಣ್ಣು ಸಾಗಿದಂತೆ ಎಚ್ಚರಿಕೆ ನೀಡಿದ್ದರು. ಆದರೆ ಎಚ್ಚರಿಕೆ ಗಣನೆಗೆ ತೆಗೆದುಕೊಳ್ಳದ ಟಿಪ್ಪರ್ ಚಾಲಕರು ನಿರಂತರವಾಗಿ ಮಣ್ಣು ಸಾಗಿಸಿದ್ದರಿಂದ ಆಕ್ರೋಶಗೊಂಡ ಅಬ್ಬೇಡಿ ಪ್ರದೇಶದ ಗ್ರಾಮಸ್ಥರು ಟಿಪ್ಪರುಗಳನ್ನು ತಡೆದು ಲಾರಿ ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಗ್ರಾ ಪಂ ಅಧ್ಯಕ್ಷೆ ದಮಯಂತಿ ಅಮೀನ್, “ಗ್ರಾಮಸ್ಥರÀ ಬೇಡಿಕೆಯಂತೆ ಕುಸಿದ ಕಾಂಕ್ರೀಟ್ ರಸ್ತೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಕುಸಿದ ಭಾಗದಲ್ಲಿ ಹೊಸ ರಸ್ತೆ ನಿರ್ಮಿಸಿಕೊಡಿ” ಎಂದು ಸ್ಥಳಕ್ಕೆ ಆಗಮಿಸಿದ ಸೈಟ್ ಮಾಲಿಕ ಮಾಧವ ಆಚಾರ್ಯಗೆ ಸೂಚಿಸಿದರು. ಆದರೆ ಅದಕ್ಕೊಪ್ಪದ ಅವರು, “ನನ್ನ ಸಹಪಾಟಿಯೊಂದಿಗೆ ಚರ್ಚಿಸಿ ಆ ಬಳಿಕ ನಿರ್ಧಾರ ಕೈಗೊಳ್ಳುವೆ” ಎಂದು ಅಧ್ಯಕ್ಷರಿಗೆ ಉತ್ತರಿಸಿದರು.

ಮಾಧ್ಯಮದ ಜೊತೆ ಮಾತನಾಡಿದ ಸೈಟ್ ಮಾಲಿಕ, “ಕಾಂಕ್ರೀಟ್ ರಸ್ತೆ ನಿರ್ಮಿಸುವಷ್ಟು ಹಣ ನಮ್ಮಲ್ಲಿಲ್ಲ, ರಸ್ತೆ ಕಾಮಗಾರಿಯ ವೈಫಲ್ಯದಿಂದ ರಸ್ತೆ ಕುಸಿದಿದೆಯೇ ಹೊರತು ಸುಮಾರು ಹತ್ತು ಟನ್ ಭಾರದ ಟಿಪ್ಪರ್ ಚಲಿಸಿ ಕುಸಿದಿರುವುದಲ್ಲ. ಈ ಬಗ್ಗೆ ನನ್ನ ಸಹಪಾಟಿಯವರೊಂದಿಗೆ ಚರ್ಚಿಸಿ ಗ್ರಾ ಪಂ.ಗೆ ಮಾಹಿತಿ ನೀಡುತ್ತೇನೆ” ಎಂದರು.

ಗ್ರಾಮಸ್ಥರೊಬ್ಬರು ಮಾತನಾಡಿ, “ಕುಸಿದ ರಸ್ತೆ ಸರಿಪಡಿಸದ ಹೊರತು ಯಾವುದೇ ಕಾರಣಕ್ಕೆ ಮಣ್ಣು ಸಾಗಿಸಲು ನಾವು ಅವಕಾಶ ನೀಡುವುದಿಲ್ಲ. ಅವರ ಭರವಸೆ ಮೌಕಿಕವಾಗಿ ಸಾಲದು, ಗ್ರಾ ಪಂ.ಗೆ ಲಿಖಿತ ಮೂಲಕ ನೀಡಿದ ಬಳಿಕವಷ್ಟೇ ಟಿಪ್ಪರ್ ಸಂಚರಿಸಲು ಅವಕಾಶ ನೀಡುತ್ತೇವೆ. ಅದೂ ಕೂಡಾ ಅಧಿಕ ಭಾರದ ಟಪ್ಪರುಗಳಿಗೆ ಅವಕಾಶವಿಲ್ಲ” ಎಂದರು.

ವಯೋವೃದ್ಧೆ ಮಹಿಳೆಯೊಬ್ಬರು ಮಾತನಾಡಿ, “ಮಣ್ಣು ಸಾಗಾಟ ಟಿಪ್ಪರುಗಳ ಆರ್ಭಟದಿಂದ ಈ ರಸ್ತೆಯಲ್ಲಿ ಶಾಲಾ ಮಕ್ಕಳು ಸಹಿತ ವಯೋವೃದ್ಧರಾದ ನಾವು ಪ್ರಾಣವನ್ನು ಕೈಯಲ್ಲಿಡಿದುಕೊಂಡು ಸಂಚರಿಸುವಂತಾಗಿದೆ. ಕಿರಿದಾದ ರಸ್ತೆಯಲ್ಲೂ ವೇಗವಾಗಿ ಚಲಿಸುತ್ತಿರುವ ಟಿಪ್ಪರುಗಳನ್ನು ನಿಯಂತ್ರಿಸಬೇಕು. ನಮ್ಮ ಬಹಳ ವರ್ಷಗಳ ಬೇಡಿಕೆ ಈಡೇರಿದೆ ಎಂಬ ಸಂತೋಷದಲ್ಲಿದ್ದ ನಮಗೆ ಅದೇ ರಸ್ತೆ ಕಂಟಕವಾಗುತ್ತಿದೆ” ಎಂದರು.

ಗ್ರಾ ಪಂ ಅಧ್ಯಕ್ಷೆ ಮಾತನಾಡಿ, “ಕುಸಿದ ರಸ್ತೆ ನಿರ್ಮಿಸಲು ಒಪ್ಪದಿದ್ದಲ್ಲಿ ಅಂತವರ ವಿರುದ್ಧ ಗ್ರಾ ಪಂ ಕಠಿಣ ನಿರ್ಣಯ ಕೈಗೊಳ್ಳಲಿದೆ” ಎಂದರು.