ಮಣಿಯಂಪಾರೆಯಲ್ಲಿ ಸಿಪಿಎಂ -ಬಿಜೆಪಿ ಘರ್ಷಣೆ : 34 ಮಂದಿ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮಣಿಯಂಪಾರೆಯಲ್ಲಿ ನಡೆದ ಸಿಪಿಎಂ-ಬಿಜೆಪಿ ಘರ್ಷಣೆಗೆ ಸಂಬಂಧಿಸಿ ಬದಿಯಡ್ಕ ಪೆÇಲೀಸರು 34 ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಮಣಿಯಂಪಾರೆಯ ಶಿವಪ್ರಸಾದ್ ನೀಡಿದ ದೂರಿನಂತೆ ಸಿಪಿಎಂ ಕಾರ್ಯಕರ್ತರಾದ ಜಯಪ್ರಕಾಶ್ (30), ಸಾದಿಕ್(32), ಪುಷ್ಪರಾಜ್ (30), ದಿನೇಶ್ (31), ಇರ್ಶಾದ್ (22), ಇಸ್ಮಾಯಿಲ್ (29) ಎಂಬವರ ಸಹಿತ 25 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಗುಂಪುಗೂಡಿ ಜಾತಿ ಹೆಸರಲ್ಲಿ ನಿಂದಿಸಿ ಹಲ್ಲೆಗೈದಿರುವುದಾಗಿ ದೂರಲ್ಲಿ ತಿಳಿಸಲಾಗಿದೆ.

ಸಿಪಿಎಂ ಕಾರ್ಯಕರ್ತ ಶೇಣಿ ಸಂಟನಡ್ಕದ ಜಯರಾಮರ ದೂರಿನಂತೆ ಬಿಜೆಪಿ ಕಾರ್ಯಕರ್ತರಾದ ಶಿವಪ್ರಸಾದ್, ಅರುಣ್, ಮಿಥುನ್, ಸುರೇಶ್ ಎಂಬವರ ಸಹಿತ ಒಂಭತ್ತು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮಣಿಯಂಪಾರೆಯಲ್ಲಿ ಘರ್ಷಣೆ ನಡೆದಿತ್ತು. ಮಣಿಯಂಪಾರೆಯಲ್ಲಿ ಕ್ಷೌರದಂಗಡಿ ನಡೆಸುವ ಸುರೇಶ್ ಎಂಬವರು ವಾಟ್ಸಪ್ ಗ್ರೂಪ್ಪಿನಿಂದ ಸ್ವತಃ ಹೊರಹೋದುದನ್ನು ಡಿವೈಎಫೈ ಕಾರ್ಯಕರ್ತರ ತಂಡ ಸೇರಿ ಪ್ರಶ್ನಿಸಿರುವುದು ಘರ್ಷಣೆಗೆ ಕಾರಣವೆಂದು ತಿಳಿದುಬಂದಿದೆ.

ಘರ್ಷಣೆಯಲ್ಲಿ ಗಾಯಗೊಂಡ ಬಿಜೆಪಿ ಕಾರ್ಯಕರ್ತರಾದ ಕ್ಷೌರದಂಗಡಿ ನಡೆಸುವ ತಂಜಾವೂರು ನಿವಾಸಿ ಸುರೇಶ್ (22), ಮಣಿಯಂಪಾರೆ ನಿವಾಸಿಗಳಾದ ಅರುಣ್ ರಾಜ್ (26), ಶಿವಪ್ರಸಾದ್ (23), ವಸಂತ (24) ಎಂಬವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಿಪಿಎಂ ಕಾರ್ಯಕರ್ತರಾದ ಬಾಡೂರು ದೇರಡ್ಕ ನಿವಾಸಿಗಳಾದ ಜಯರಾಮ (35), ಸುಬ್ರಹ್ಮಣ್ಯ (27) ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.