ಸಂಸದ ಅನಂತಕುಮಾರ್ ಬಂಧನಕ್ಕೆ ಸಿಪಿಐಎಂ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಜನತೆಯ ಹಕ್ಕು ರಕ್ಷಿಸಬೇಕಾದ ಪ್ರಜಾಪ್ರಭುತ್ವದ ಜನಪ್ರತಿನಿಧಿಯಾದ ಬಿಜೆಪಿಯ ಸಂಸದ ಪದೇಪದೇ ಸಾರ್ವಜನಿಕರು, ಅಧಿಕಾರಿಗಳು ಹಾಗೂ ತಮ್ಮದೇ ಪಕ್ಷದ ಮುಖಂಡರ ಮೇಲೂ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸುವ, ಉದ್ರೇಕಕಾರಿ ವಿವಾದಾತ್ಮಕ ಭಾಷಣ ಮಾಡಿ ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ನೀಚ ಕೃತ್ಯ ಮಾಡುತ್ತಿದ್ದಾರೆ. ಇಂಥ ಸಂಸದರನ್ನು ಈ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಭಾರತ ಕಮ್ಯುನಿಷ್ಟ ಪಕ್ಷ (ಮಾಕ್ರ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ಬುಧವಾರ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಈ ಬಗ್ಗೆ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವಕರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಶಿರಸಿಯ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಹಾಗೂ ಒಬ್ಬ ಸಿಬ್ಬಂದಿಯ ಮೇಲೆ ದೈಹಿಕ ಹಲ್ಲೆ ಮಾಡಿ ಬಾಯಿಗೆ ಬಂದಂತೆ ಬೈದ ಘಟನೆಯು ಅತ್ಯಂತ ಖಂಡನೀಯ. ಸದಾ ಕಾನೂನು ಉಲ್ಲಂಘನೆಯಲ್ಲೇ ಇರುವ ಸಂಸದರ ಗೂಂಡಾ ಭೀತಿಯ ಕಾರಣಕ್ಕೆ ಹಲ್ಲೆ ಘಟನೆ ಕುರಿತು ಪೊಲೀಸ್ ದೂರು ದಾಖಲಿಸಲು ಹಿಂದೇಟು ಹಾಕುತ್ತಿರುವುದು ಎದ್ದು ಕಾಣುತ್ತಿದೆ. ಹಾಗಾಗಿ ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಅನುವಾಗುವಂತೆ ಜಿಲ್ಲಾಡಳಿತ ವೈದ್ಯರಿಗೆ ಭದ್ರತೆ ನೀಡಬೇಕು. ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವದ ಗೌರವ ಕಾಪಾಡುವ ಸಲುವಾಗಿ ಅನಂತಕುಮಾರ್ ಹೆಗಡೆಯವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮವಹಿಸಲು ಆಗ್ರಹಿಸುತ್ತೇವೆಂದು ಅವರು ತಿಳಿಸಿದ್ದಾರೆ.

ಸಂಘಪರಿವಾರ ಸಂಸ್ಕøತಿಯ ವಕ್ತಾರರಾದ ಬಿಜೆಪಿಯ ದಕ್ಷಿಣ ಕನ್ನಡದ ಸಂಸದ ನಳಿನಕುಮಾರ್ ಬೆಂಕಿ ಹಚ್ಚುವ ಮಾತನಾಡುತ್ತಿದ್ದಾರೆ. ಉತ್ತರ ಕನ್ನಡದ ಸಂಸದರು ಮಾತೆತ್ತಿದರೆ ಕೋಮು ಹಿಂಸೆ ಹುಟ್ಟಿಸಿ `ಕಡಿಕೊಚ್ಚು’ ಎಂದು ವಿದ್ವಂಸದ ಕರೆಕೊಡುತ್ತಾರೆ. ನಿತಂತರವಾಗಿ ಇಂಥ ಹಿಂಸಾತ್ಮಕ ಕ್ರಿಯೆ ನಡೆಸುತ್ತಿರುವ ಸಂಸದರ ವರ್ತನೆಗೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರ ಮೌನ ವಹಿಸಿವೆ. ಸ್ವತಃ ಕಾಂಗ್ರೆಸ್ ಮುಖಂಡರೇ ಟಿ ಎಸ್ ಎಸ್ ಅಧ್ಯಕ್ಷರಾಗಿದ್ದು, ಸಂಸ್ಥೆಯ ಹೆಸರು ಉಳಿಸಿಕೊಳ್ಳಲು ಮತ್ತು ಲಾಭದ ಉದ್ದೇಶದಿಂದ ರಾಜಿ ಸಂಧಾನದ ಪರದೆ ಎಳೆಯಲು ಮುಂದಾಗಿರುವುದು ಖೇದಕರ ಎಂದು ತಿಳಿಸಿದ್ದಾರೆ.

ತಕ್ಷಣ ಆಸ್ಪತ್ರೆ ಆಡಳಿತ ಸಮಿತಿ ತಮ್ಮ ಸಿಬ್ಬಂದಿ ಪರವಾಗಿ ಸಂಸದರ ಗೂಂಡಾ ದಾಳಿಯ ವಿರುದ್ಧ ದೂರು ಕೊಟ್ಟು ವೈದ್ಯರು, ನರ್ಸುಗಳು, ಇತರೇ ಸಿಬ್ಬಂದಿಗೆ ನ್ಯಾಯ ಕೊಡಿಸಲು ಮುಂದಾಗಬೇಕೆಂದು ಸಿಪಿಐ(ಐಂ) ಆಗ್ರಹಿಸಿದೆ.