ಕಾಲು ಕಟ್ಟಿದ ರೀತಿಯಲ್ಲಿ ದನದ ಕಳೇಬರ ಪತ್ತೆ

ಪರಿವಾರ ಕಾರ್ಯಕರ್ತರಿಂದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಆರ್ಯಾಪು ಗ್ರಾಮದ ಸಂಟ್ಯಾರ್ ಸಮೀಪದ ಕಾರ್ಪಾಡಿ ಎಂಬಲ್ಲಿನ ಆಟದ ಮೈದಾನವೊಂದರ ಬಳಿ ಗಬ್ಬದ ದನದ ಕಳೆಬರವೊಂದು ಕಾಲು ಕಟ್ಟಿದ ರೀತಿಯಲ್ಲಿ ಪತ್ತೆಯಾಗಿದ್ದು ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪರಿವಾರ ಸಂಘಟನೆ ಕಾರ್ಯಕರ್ತರು ಮೃತ ದನವನ್ನು ದಫನ ಮಾಡಿ ಬಳಿಕ ಹೆದ್ದಾರಿ ತಡೆದು ಸಾಂಕೇತಿಕ ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು. ಕಾರ್ಪಾಡಿ ಬಳಿ ಇರುವ ಖಾಸಗಿ ಜಾಗವೊಂದಲ್ಲಿ ದನದ ಕಳೆಬರ ಪತ್ತೆಯಾಗಿದೆ.

ದನದ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ನೋಡಲು ಗಬ್ಬದ ದನದಂತೆ ಕಾಣುತ್ತಿದೆ. ಅದೇ ಸ್ಥಳದಲ್ಲಿ ವಾಹನಗಳು ಬಂದ ಕುರುಹು ಇದೆ. ಯಾವುದೋ ವಾಹನದಲ್ಲಿ ದನ ಸಾಗಾಟ ಮಾಡುವ ವೇಳೆ ವಾಹನದ ಟಯರ್ ಪಂಕ್ಚರ್ ಆಗಿದ್ದು, ವಾಹನ ಟಯರ್ ಬದಲಾಯಿಸಲು ಮೈದಾನಕ್ಕೆ ಬಂದಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲಿಗೆ ಬಂದು ವಾಹನದಲ್ಲಿದ್ದ ದನವನ್ನು ಕೆಳಗೆ ಇಳಿಸಿದ ಕುರುಹು ಪತ್ತೆಯಾಗಿದೆ. ಬಳಿಕ ಜಾಕ್ ಕೊಟ್ಟು ಟಯರ್ ಬದಲಾಯಿಸಿದ ಕುರುಹು ಪತ್ತೆಯಾಗಿದೆ. ಮೈದಾನ ರಸ್ತೆಯ ಪಕ್ಕದಲ್ಲೇ ಇದ್ದರೂ ರಸ್ತೆಗಿಂತ ಎತ್ತರದಲ್ಲಿದ್ದ ಕಾರಣ ಯಾರಿಗೂ ಗೋಚರಿಸುವುದಿಲ್ಲ ಮತ್ತು ಸಮೀಪದಲ್ಲಿ ಮನೆ ಇಲ್ಲದೇ ಇರುವುದು ಇಲ್ಲಿಯೆ ದನವನ್ನು ಎಸೆಯಲು ಕಾರಣ ಎನ್ನಲಾಗಿದೆ.

ಪರಿವಾರ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲೇ ಗುಂಡಿ ತೆಗೆದು ವಿಧಿ ವಿಧಾನಗಳನ್ನು ನೆರವೇರಿಸಿ ದನವನ್ನು ದಫನ ಮಾಡಿದ್ದಾರೆ. ಬಳಿಕ ಕಾರ್ಯಕರ್ತರು ಮಾಣಿ-ಮೈಸೂರು ಹೆದ್ದಾರಿಯಲ್ಲಿ ನಿಂತು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಘಟನಾ ಸ್ಥಳಕ್ಕೆ ಗ್ರಾಮಾಂತರ ಇನಸ್ಪೆಕ್ಟರ್ ಅನಿಲ್ ಕುಲಕರ್ಣಿ, ಎಸೈ ಅಬ್ದುಲ್ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದನವನ್ನು ಎಸದು ಹೋದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ಕಾರ್ಯ ನಡೆಯಲಿದೆ ಎಂದು ಎಸೈ ಖಾದರ್ ಪತ್ರಕರ್ತರಿಗೆ ತಿಳಿಸಿದರು.