ಆಮೆಗತಿಯಲ್ಲಿ ಸಾಗುತ್ತಿದೆ ಕೋರ್ಟ್ ರಸ್ತೆ ಕಾಮಗಾರಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಶೇಷ ತಂತ್ರಜ್ಞಾನ ಬಳಸಿ ನಗರದ ಹೃದಯ ಭಾಗದಲ್ಲಿರುವ ಕೋರ್ಟ್ ರಸ್ತೆ ಕಾಮಗಾರಿ ಇನ್ನೂ ವಿಳಂಬವಾಗುತ್ತಿದೆ. ಕಾಮಗಾರಿಯನ್ನು ಕೈಗೆತ್ತಿಕೊಂಡು ಆರು ತಿಂಗಳು ಕಳೆದರೂ ಆಮೆಗತಿಯಲ್ಲಿ ಕೆಲಸ ಸಾಗಿದೆ. ಸುಮಾರು 14 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ರಸ್ತೆ ಅಗಲೀಕರಣ ಕಾಮಗಾರಿಯನ್ನು ರಾಜ್ಯ ಸರಕಾರದ ಅನುಮೋದನೆಯೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿತ್ತು.

ನಗರದ ಹೃದಯಭಾಗದಲ್ಲೇ ಇರುವ ರಸ್ತೆ ಪಕ್ಕ ಸಾಲು ಸಾಲು ಮರಗಳಿಗೆ ಕೊಡಲಿ ಏಟು ಹಾಕುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಮರಗಳನ್ನು ರಕ್ಷಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ವಿಶೇಷ ತಂತ್ರಜ್ಞಾನವನ್ನು ಬಳಸಿ ರಸ್ತೆ ನಿರ್ಮಾಣ ಮಾಡಬೇಕಾಗಿರುವುದರಿಂದ ಬೆಂಗಳೂರಿನಿಂದ ಕಳೆದ ನಾಲ್ಕು ತಿಂಗಳಿನಿಂದ ಆಗಮಿಸುತ್ತಿರುವ ತಂತ್ರಜ್ಞರು ಕೂಡಾ ಸರಿಯಾದ ನಿರ್ಧಾರಕ್ಕೆ ಬಾರದೇ ವಾಪಸ್ ತೆರಳುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರರಿಗೂ ಕಾಮಗಾರಿ ತ್ವರಿತಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

ಜೂನ್-ಜುಲೈ ತಿಂಗಳಿನಲ್ಲಿ ಮಳೆ ಆರಂಭವಾಗಲಿರುವುದರಿಂದ ಇದರ ಕಾಮಗಾರಿ ಮತ್ತೆ ಒಂದು ವರ್ಷ ವಿಳಂಬಗೊಳ್ಳಲಿದೆ. “ತಾಂತ್ರಿಕ ಕಾರಣ ಮುಂದಿಟ್ಟು ರಸ್ತೆ ಕಾಮಗಾರಿಯನ್ನು ವಿಳಂಬ ಮಾಡಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ” ಮಾಜಿ ಕಾರ್ಪೊರೇಟರ್ ರಂಗನಾಥ ಕಿಣಿ. “ರಸ್ತೆಯನ್ನು ಬ್ಲಾಕ್ ಮಾಡಿ ವಾಹನಗಳು ತೆರಳದಂತೆ ಮಾಡಿದ್ದಾರೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ತಿಗೊಳಿಸಲು ಸಾಧ್ಯವಿಲ್ಲವೆಂದಾದರೆ ಇದನ್ನು ಕೈಗೆತ್ತಿಕೊಳ್ಳಬಾರದು” ಎನ್ನುತ್ತಾರವರು.

“ಇಲ್ಲಿನ ಮಣ್ಣು ಒಂದು ವಿಶೇಷ ಗುಣದಿಂದ ಕೂಡಿರುವುದರಿಂದ ಪ್ರತ್ಯೇಕ ವಿಧಾನವನ್ನು ಅನುಸರಿಸಿ ರಸ್ತೆ ನಿರ್ಮಾಣ ಮಾಡಬೇಕಾಗಿದೆ” ಎನ್ನುತ್ತಾರೆ ಎಂಸಿಸಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಾಂತರಾಜು. “ಗುತ್ತಿಗೆದಾರರ ಮತ್ತು ಸಲಹೆಗಾರರ ಸಮನ್ವಯತೆಯ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ” ಎನ್ನುತ್ತಾರೆ ಕಾರ್ಪೊರೇಟರ್ ವಿನಯರಾಜ್.