ವಿಚ್ಛೇದಿತ ಪತ್ನಿಗೆ ರೂ 4 ಕೋಟಿ ಜೀವನಾಂಶ : ಮಾಜಿ ಸಚಿವನ ಪುತ್ರನಿಗೆ ಕೋರ್ಟ್ ಆದೇಶ

ಮಗನ ವಿರುದ್ಧ ಸಾಕ್ಷ್ಯ ನುಡಿದ ತಾಯಿ

ಬೆಂಗಳೂರು : ಮಾಜಿ ಸಚಿವ  ಎಸ್ ಆರ್ ಕಾಶಪ್ಪನವರ್ ಪುತ್ರ ದೇವಾನಂದ್ ಶಿವಶಂಕರಪ್ಪ ಕಾಶಪ್ಪನವರ್ ಪತ್ನಿ ಸಲ್ಲಿಸಿದ್ದ ವಿವಾಹ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿ ವಿಚ್ಛೇದನ ನೀಡಿರುವ  ಇಲ್ಲಿನ ಕುಟುಂಬ ನ್ಯಾಯಾಲಯವು ವಿಚ್ಛೇದಿತ ಪತ್ನಿಗೆ ರೂ 4 ಕೋಟಿ ಜೀವನಾಂಶವನ್ನು ಮುಂದಿನ 60 ದಿನಗಳೊಳಗಾಗಿ ಪಾವತಿಸುವಂತೆ ದೇವಾನಂದಗೆ ಆದೇಶಿಸಿದೆ.

ಕುತೂಹಲಕಾರಿಯಾಗಿ ಈ ವಿಚ್ಛೇದನ ಪ್ರಕರಣದಲ್ಲಿ ದೇವಾನಂದ್ ಅವರ ತಾಯಿ ಕೂಡ ತಮ್ಮ ಮಗನ ವಿರುದ್ಧ ಸಾಕ್ಷಿ ನುಡಿದಿದ್ದಾರೆ.

ದೇವಾನಂದ್ ವಿವಾಹ ಮೇ 22, 2011ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್ ಎಂಬಲ್ಲಿ ಅವರ ಸೋದರಿಯ ಪುತ್ರಿಯೊಡನೆ ನಡೆದಿತ್ತು. ಆದರೆ ಅವರ ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯಲ್ಲಿ ಆಕೆಯ ಇಚ್ಛೆಯ ವಿರುದ್ಧವಾಗಿ ವಿವಾಹ ನಡೆದಿತ್ತು ಎಂದು ಆರೋಪಿಸಲಾಗಿದೆ. ಆರಂಭದಲ್ಲಿ ತನ್ನ ಜತೆ ಚೆನ್ನಾಗಿಯೇ ವರ್ತಿಸುತ್ತಿದ್ದ ದೇವಾನಂದ್ ವರ್ತನೆ ನಂತರ ಬದಲಾಗಿದ್ದು ಆತನಿಗೆ ಬೇರೊಬ್ಬಳೊಂದಿಗೆ ಅನೈತಿಕ ಸಂಬಂಧವೂ ಇದೆಯೆಂದು ತನಗೆ ತಿಳಿದುಬಂದಿತ್ತು, ಇದನ್ನು ವಿರೋಧಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರಿದ್ದರು.

ತರುವಾಯ ಕುಟುಂಬ ನ್ಯಾಯಾಲಯದ ಮುಂದೆ ದೇವಾನಂದ್ ತಾಯಿ ತಾವು ಸಲ್ಲಿಸಿದ ಅಫಿದಾವಿತ್ತಿನಲ್ಲಿ ತನ್ನ ಪುತ್ರ ಇನ್ನೊಬ್ಬ ಮಹಿಳೆಯನ್ನು ಕುಟುಂಬದ ಇಚ್ಛೆಗೆ ವಿವಾಹವಾಗಿ ಆಕೆಯಿಂದ ಮಗುವೊಂದನ್ನೂ  ಪಡೆದಿದ್ದಾನೆ ಎಂದಿದ್ದರಲ್ಲದೆ “ವಿಲಾಸಿ ಜೀವನ ನಡೆಸುವ ಆತ ತನ್ನ ವೈವಾಹಿಕ ಕರ್ತವ್ಯಗಳನ್ನು ನಿರ್ವಹಿಸಲು ವಿಫಲನಾಗಿದ್ದಾನೆ” ಎಂದು ಹೇಳಿದ್ದರು.