ಮಾಜಿ ನಗರಸಭಾಧ್ಯಕ್ಷನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಉಡುಪಿ ನ್ಯಾಯಾಲಯ ಆದೇಶ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಾಜಿ ನಗರಸಭಾಧ್ಯಕ್ಷ ಹಾಗೂ ಹೆರ್ಗ ವಾರ್ಡ್ ಬಿಜೆಪಿ ನಗರಸಭಾ ಸದಸ್ಯ ದಿನಕರ್ ಶೆಟ್ಟಿ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಬೋನಿಫಸ್ ಡಿಸೋಜ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಆದೇಶವನ್ನು ಹೊರಡಿಸಲಾಗಿದೆ.

ಜೂನ್ 14ರಂದು ರೋಬರ್ಟ್ ಮನೆಯಲ್ಲಿದ್ದ ಸಮಯ ಆರೋಪಿ ದಿನಕರ್ ಶೆಟ್ಟಿ ಹಾಗೂ ಆತನ ಸಹಚರರು ಕೈ ಹಾಗೂ ರಾಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಬೋನಿಫಸ್ ಅವರ ಸಹೋದರ ರೋಬರ್ಟ್ ಪೀಟರ್ ಡಿಸೋಜ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ರಾಜಕೀಯ ಪ್ರಭಾವದಿಂದ ಪೊಲೀಸರು ದೋಷಾರೋಪಣ ಪಟ್ಟಿಯಿಂದ ದಿನಕರ್ ಹೆಸರನ್ನು ಕೈಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ರೋಬರ್ಟ್ ನ್ಯಾಯಾಲಯದ ಮೊರೆ ಹೋಗಿದ್ದರು. ಆರೋಪಿ ದಿನಕರ್ ವಿರುದ್ಧ ಕೇಸು ದಾಖಲಿಸುವಂತೆ ನ್ಯಾಯಾಲಯ ಮಣಿಪಾಲ ಪೊಲೀಸರಿಗೆ ಆದೇಶ ನೀಡಿದೆ.