ಉದ್ಯೋಗ ಕೊಡಿಸುವ ನೆಪದಲ್ಲಿ ವ್ಯಕ್ತಿಯಿಂದ ದಂಪತಿಗೆ ವಂಚನೆ

ನಮ್ಮ ಪ್ರತಿನಿಧಿ ವರದಿ

ಕಾರವಾರ : ವ್ಯಕ್ತಿಯೊಬ್ಬ ದಂಪತಿಗೆ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಚಾಮರಾಜನಗರದ ರಾಮು ಗೌಡ ಹಾಗೂ ಮಾಧವಿ ಗೌಡ ಎಂಬ ದಂಪತಿ ಮೋಸ ಹೋದವರು. ಈ ದಂಪತಿಗೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಶೇಖರಪ್ಪ ಎಂಬವರು ಅವರನ್ನು ಕಾರವಾರಕ್ಕೆ ಕರೆಸಿದ್ದರು. ಅವರು ಇಲ್ಲಿಗೆ ಬಂದ ಬಳಿಕ ದಂಪತಿಗೆ ಉದ್ಯೋಗ ಒದಗಿಸಲು 2,000 ರೂ ಅಗತ್ಯವಿದೆ ಎಂದು ಅವರಿಂದ ಹಣ ಪಡೆದು ಅಲ್ಲಿಂದ ಪಲಾಯನಗೈಯ್ದಿದ್ದಾರೆ. ಹಣ ಪಡೆದುಹೋದ ಶೇಖರಪ್ಪನ ಸುಳಿವಿಲ್ಲದ ದಂಪತಿ ಆತಂಕಗೊಂಡಿದ್ದಾರೆ. ಇದ್ದ ಹಣವನ್ನೆಲ್ಲ ಶೇಖರಪ್ಪನಿಗೆ ನೀಡಿ ಊಟಕ್ಕೂ ಗತಿಯಿಲ್ಲದೇ ದಂಪತಿ ಪರದಾಡಬೇಕಾಯಿತು. ರಾತ್ರಿ ಸಮಯದಲ್ಲಿ ಅಂಗಡಿಯೊಂದರ ಮುಂದೆ ಮಲಗಿದ್ದರು. ಇದೇ ಸಂದರ್ಭದಲ್ಲಿ ರಾಮು ಗೌಡರಿಗೆ ಫಿಟ್ಸ್ ಬಂದು ಹೊರಳಾಡಿದರು. ಇದನ್ನು ಗಮನಿಸಿದ ಮಕ್ಕಳ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ ರಾಮು ಗೌಡರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಊಟ ಮತ್ತು ರೈಲಿನ ಟಿಕೆಟ್ ಒದಗಿಸಿ ಯಶವಂತಪುರಕ್ಕೆ ತೆರಳುವ ರೈಲಿನ ಮೂಲಕ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.