ಅಣ್ಣ , ಅತ್ತಿಗೆ ಮಾಟಗಾರರೆಂದು ಸುಟ್ಟು ಕೊಂದ ಸಹೋದರರು

ಹೈದರಾಬಾದ್ :  ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ದುಬ್ಬಕ್ ಎಂಬ ಹಳ್ಳಿಯಲ್ಲಿ  ವ್ಯಕ್ತಿಗಳಿಬ್ಬರು ತಮ್ಮ ಅಣ್ಣ ಹಾಗೂ ಅತ್ತಿಗೆಗೆ ಮಾಟಗಾರರೆಂಬ ಹಣೆಪಟ್ಟಿ ಕಟ್ಟಿ ಗ್ರಾಮಸ್ಥರೊಂದಿಗೆ ಸೇರಿಕೊಂಡು ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಜೀವಂತ ಸುಟ್ಟಿದ್ದಾರೆ. ತೀವ್ರ ಗಾಯಗಳಾಗಿದ್ದ ಇಬ್ಬರೂ ಶುಕ್ರವಾರ ಮೃತಪಟ್ಟಿದ್ದಾರೆ. ಮೃತರನ್ನು ಕಡವೇರ್ಲು ಸುದರ್ಶನ್ (56) ಮತ್ತಾತನ ಪತ್ನಿ ರಾಜೇಶ್ವರಿ (52) ಎಂದು ಗುರುತಿಸಲಾಗಿದೆ.

ಸುದರ್ಶನ್ ಕಿರಿಯ ಸಹೋದರರಾದ ಶ್ರೀನಿವಾಸುಲು ಮತ್ತು ಮಲ್ಲೇಶಂ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಸಹೋದರರ ನಡುವೆ ಇದ್ದ ಆಸ್ತಿ ತಕರಾರೇ ಈ ಘಟನೆಗೆ ಕಾರಣವೆಂದು ಹೇಳಲಾಗಿದೆಯಾದರೂ  ದಂಪತಿ ಮಾಟಮಂತ್ರದಲ್ಲಿ ತೊಡಗಿದ್ದ್ದರೆಂದು ಆರೋಪಿಗಳು ಹಳ್ಳಿಯಲ್ಲಿ ಸುದ್ದಿ ಹಬ್ಬಿಸಿದ್ದರು. ಅದಕ್ಕೆ ತಕ್ಕಂತೆ ಇತ್ತೀಚೆಗೆ ಗ್ರಾಮದಲ್ಲಿ ಮಗುವೊಂದು  ಹಾಗೂ ಎಮ್ಮೆಯೊಂದು ಸತ್ತಿರುವುದೂ ಗ್ರಾಮಸ್ಥರನ್ನು ಮತ್ತಷ್ಟು ಭಯಭೀತಗೊಳಿಸಿತ್ತೆನ್ನಲಾಗಿದೆ.  ತಮ್ಮ ತಂದೆಯ ಸಾವಿಗೂ ದಂಪತಿಯೇ ಕಾರಣವೆಂದು ಆರೋಪಿಗಳು ಹುಯಿಲೆಬ್ಬಿಸಿದ್ದರು.

ಗುರುವಾರ ರಾತ್ರಿ ಮತ್ತೆ ಸುದರ್ಶನ್ ಜತೆ ಜಗಳವಾಡಿದ ಆರೋಪಿಗಳು ಅವರನ್ನು ದರದರನೆ ರಸ್ತೆಗೆಳೆದು ವಿದ್ಯುತ್ ಕಂಬಕ್ಕೆ ಕಟ್ಟಿ ಕೆಲ ಗ್ರಾಮಸ್ಥರೊಡಗೂಡಿ  ಥಳಿಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ತಮ್ಮ ಹೆತ್ತವರನ್ನು ಕಾಪಾಡಲು ಯತ್ನಿಸಿದ್ದ ರೇಣುಕಾ ಹಾಗೂ ಶ್ರೀಧರ್ ಕೂಡ ಗಾಯಗೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.