ಸರ್ಕಾರಿ ಜಾಗದಲ್ಲಿ ಅಕ್ರಮ ಬೋರ್ವೆಲ್ ಆಕ್ಷೇಪಿಸಿದ ದಂಪತಿಗೆ ಮಾರಕ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ರಾಜಕೀಯ ಪ್ರಭಾವ ಹಾಗೂ ಹಣ ಬಲದಿಂದ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿದ್ದಲ್ಲದೆ ಸಹಾಯಕ ಆಯುಕ್ತರ ತಡೆಯಾಜ್ಞೆ ಉಲ್ಲಂಘಿಸಿ ಕಬಳಿಸಿಕೊಂಡ ವಿವಾದಿತ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಬೋರ್ವೆಲ್ ನಿರ್ಮಿಸಿದ ಬಗ್ಗೆ ಆಕ್ಷೇಪಿಸಿದ ದಂಪತಿಯ ಮೇಲೆ ಮಾರಕಾಯುಧಗಳಿಂದ ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದ ಭೂಮಾಲಿಕನ ನೇತೃತ್ವದ ತಂಡದ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಮೊಗ್ರು ಗ್ರಾಮದ ನಾಯ್ಮಾರ್ ಎಂಬಲ್ಲಿನ ನಿವಾಸಿ ಭೂ ಮಾಲಿಕ ಸುಧಾಕರ ಗೌಡ ಎಂಬಾತನ ನೇತೃತ್ವದ ಸುಮಾರು 25ಕ್ಕೂ ಅಧಿಕ ಮಂದಿಯ ಅಕ್ರಮ ಕೂಟ ಈತ ಒತ್ತುವರಿ ಮಾಡಿಕೊಂಡಿರುವ ಸ ನಂ 72ರ ವಿವಾದಿತ ಸರ್ಕಾರಿ ಜಾಗಕ್ಕೆ ಅಕ್ರಮ ಪ್ರವೇಶಿಸಿ ಕಾನೂನು ಬಾಹಿರವಾಗಿ ಬೋರ್ವೆಲ್ ಕೊರೆದಿದ್ದು, ಈ ಸಂದರ್ಭ ಆಕ್ಷೇಪಿಸಿದ ಸ್ಥಳೀಯ ಪರಾರಿ ನಿವಾಸಿ ಡೊಂಬಯ್ಯ ಗೌಡ ದಂಪತಿಗೆ ಅವಾಚ್ಯವಾಗಿ ಬೈಯ್ದು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಇದೇ ಸಂದರ್ಭ ಭೂ ಮಾಲಿಕ ಸುಧಾಕರ ಗೌಡರ ಪತ್ನಿ ಹೇಮಾವತಿ ಬಂದೂಕು ತೋರಿಸಿ ಜೀವಬೆದರಿಕೆಯೊಡ್ಡಿದ್ದಾರೆ.

ಎನ್ ಸಿ ಆರ್ ಎಸ್ ಆರ್ 272/98-99 ಮತ್ತು 20-3.2002ರ ವಿರುದ್ಧ ಪುತ್ತೂರು ಸಹಾಯಕ ಆಯುಕ್ತರು ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಕಲಂ 49ರನ್ವಯ ಸಲ್ಲಿಸಿದ ಅಪೀಲು ಬಗ್ಗೆ ವಿವಾದವು ಇತ್ಯರ್ಥವಾಗುವವರೆಗೆ ವಿವಾದಿತ ಜಾಗದ ಬಗ್ಗೆ ಮುಂದಿನ ವಿಚಾರಣೆ ದಿನಾಂಕದ ತನಕ ಯಥಾಸ್ಥಿತಿ ಕಾಪಾಡುವಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದರು. ಆದರೆ ತಡೆಯಾಜ್ಞೆಯನ್ನು ಉಲ್ಲಂಘಿಸಿ ಅಕ್ರಮ ಪ್ರವೇಶಿಸಿ ಬೋರ್ವೆಲ್ ಕೊರೆಯಿಸಿದ ಭೂ ಮಾಲಿಕ ಸುಧಾಕರ ಗೌಡ ಮತ್ತು ಬೋರ್ವೆಲ್ ಕಾರ್ಮಿಕರ ಸೋಗಿನಲ್ಲಿ ಬಂದ ಅಕ್ರಮ ಕೂಟ ಡೊಂಬಯ್ಯ ಗೌಡ ದಂಪತಿಯ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಸುಧಾಕರ ಗೌಡ ದಂಪತಿಯನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿ ಮುಚ್ಚಳಿಕೆ ಪಡೆದುಕೊಂಡಿದ್ದು ತನಿಖೆ ನಡೆಯುತ್ತಿದೆ.