ಪಡುಬಿದ್ರಿ ಮಹಿಳೆಗೆ ದಂಪತಿಯಿಂದ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ತನ್ನ ಮಗಳ ಮದುವೆ ಆಮಂತ್ರಣ ಪತ್ರ ಹಂಚುತ್ತಿದ್ದ ಮಹಿಳೆಯೋರ್ವರಿಗೆ ಸ್ಥಳೀಯ ನಿವಾಸಿ ದಂಪತಿ ಪಡುಬಿದ್ರಿ ಕೆಳಗಿನ ಪೇಟೆಯ ವೆಂಕಟರಮಣ ದೇವಳದ ಬಳಿ ಮುಖಕ್ಕೆ ಮೆಣಸಿನ ಹುಡಿ ಎರಚಿ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಮಹಿಳೆ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ ಕೆಳಗಿನ ಪೇಟೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಮೀಪದ ನಿವಾಸಿ ಗೀತಾ ಕಾಮತ್ ಎಂಬವರು ತನ್ನ ಮಗಳ ಮದುವೆಯ ಆಮಂತ್ರಣ ಪತ್ರವನ್ನು ವೆಂಕಟರಮಣ ದೇವಸ್ಥಾನದ ಸಮೀಪ ನಿವಾಸಿ ವಿಶ್ವನಾಥ್ ಭಟ್ ಎಂಬವರ ಮನೆಗೆ ನೀಡಿ ಮತ್ತೊಂದು ಮನೆಗೆ ಹೋಗುತ್ತಿದ್ದ ವೇಳೆ, ಎದುರಾದ ಸ್ಥಳೀಯ ನಿವಾಸಿಗಳಾದ ಪ್ರಶಾಂತ್ ಶೆಣೈ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಶೆಣೈ ಏಕಾಏಕಿ ತನ್ನ ಮುಖಕ್ಕೆ ಮೆಣಸಿನ ಹುಡಿ ಎರಚಿ ಕಟ್ಟಿಗೆ ಹಾಗೂ ಕೈಗಳಿಂದ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಡುಬಿದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.