ಎಂಪಿಎಲ್ 3.0 ಉದ್ಘಾಟನೆಗೆ ದಿನಗಣನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಣಂಬೂರಿನ ನವಮಂಗಳೂರು ಬಂದರು ಟ್ರಸ್ಟ್ ಬಿ ಆರ್ ಅಂಬೇಡ್ಕರ್ ಮೈದಾನದಲ್ಲಿ ಡಿಸೆಂಬರ್ 17ರಿಂದ ಆರಂಭವಾಗಲಿರುವ 15 ದಿನಗಳ ಕ್ರಿಕೆಟ್ ಪಂದ್ಯಾಟಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ.

ಮಂಗಳೂರಿನಿಂದ ಸುಮಾರು 12 ಕಿ ಮೀ ದೂರದ ಪಣಂಬೂರಿನಲ್ಲಿ ಈ ಪಂದ್ಯಾಟ ನಡೆಯಲಿದ್ದು, ಅಬ್ಬರದ ಉದ್ಘಾಟನೆಯ ಸಿದ್ಧತೆಯಲ್ಲಿ ಸಂಘಟಕರು ಇದ್ದಾರೆ.

ಮೈದಾನದಲ್ಲಿ ಹೊಸದಾಗಿ ಆಸ್ಟ್ರೋ ಟರ್ಫ್ ನಿರ್ಮಿಸಲಾಗಿದೆ. ಸುಮಾರು 30 ಯಾರ್ಡ್ ವೃತ್ತಾಕಾರದಲ್ಲಿ ಹುಲ್ಲು ಬೆಳೆಯಲಾಗಿದೆ. ಸ್ಥಳೀಯ ಕ್ರಿಕೆಟ್ ಆಟಗಾರರ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ಪಂದ್ಯಾಟವನ್ನು ಅತ್ಯುನ್ನತ ಮಟ್ಟದಲ್ಲಿ ನಡೆಸುವ ಚಿಂತನೆ ಸಂಘಟಕರದ್ದು.

ಸುಮಾರು 60 ಅಡಿ ಎತ್ತರದಲ್ಲಿ ಎಂಟು ಲೈಟ್ ಟವರ್ ಅಳವಡಿಸಲಾಗಿದೆ.

ಉದ್ಘಾಟನೆಯ ಅಬ್ಬರಕ್ಕೆ ಮೆರುಗು ನೀಡಲು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಆಗಮಿಸಲಿದ್ದಾರೆ.  ರಷ್ಯನ್ ಫಯರ್ ಡ್ಯಾನ್ಸ್ ಕೂಡ ನಡೆಯಲಿದೆ. ಮಣಿಪಾಲ ವಿಶ್ವವಿದ್ಯಾನಿಲಯದ ಬ್ಲಿಡ್ಜ್ ಡ್ಯಾನ್ಸ್ ಟ್ರೂಪ್ ಹಿಪ್ ಹಾಪ್ ಡ್ಯಾನ್ಸ್, ಲೇಸರ್ ಶೋ, ಡ್ರಾಗನ್ ಡ್ಯಾನ್ಸ್, ಟಾಲ್ ಮ್ಯಾನ್ ಶೋ, ಸುಡುಮದ್ದುಗಳು ಮತ್ತಿತರ ಹಲವಾರು ಆಕರ್ಷಣೆಗಳು ಉದ್ಘಾಟನೆಯ ದಿನ ಮಿಂಚಲಿದೆ. ಕರಾವಳಿ ನಗರದ ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷವಾದ ಅನುಭವ ನೀಡಬೇಕೆಂಬುದೇ ನಮ್ಮ ಉದ್ದೇಶ ಎಂದು ಎಂಪಿಎಲ್ ಸಂಘಟಿಸುತ್ತಿರುವ ಕೆ ಆರ್ ಸಿ ಎ ಅಧ್ಯಕ್ಷ ಸಿರಾಜುದ್ದೀನ್ ಹೇಳಿದ್ದಾರೆ.