ಸದಸ್ಯರ ಮಧ್ಯೆ ಮಾತಿನ ಚಕಮಕಿ

ಕಾಪು ಪುರಸಭೆಯಲ್ಲಿ ಒಳಚರಂಡಿ ವ್ಯವಸ್ಥೆ ಬಗ್ಗೆ ಚರ್ಚೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಾಪು ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ಹೋಟೆಲ್, ವಸತಿಗೃಹಗಳ ತ್ಯಾಜ್ಯ ನೀರು ಹರಿಯುತ್ತಿದ್ದು, ದುರ್ವಾಸನೆ ಒಂದು ಕಡೆಯಾದರೆ ಅದರಲ್ಲಿ ಹುಟ್ಟಿಕೊಂಡ ಸೊಳ್ಳೆಗಳ ಕಾಟ ಮತ್ತೊಂದು ಕಡೆ. ಈ ಬಗ್ಗೆ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ನಿರ್ಮಾಣಗೊಳ್ಳಲಿರುವ ಹೊಸ ಪುರಸಭಾ ಕಟ್ಟಡದ ಮುಂಭಾಗದಲ್ಲೇ ತ್ಯಾಜ್ಯ ನೀರು ಶೇಕರಣಾ ಘಟಕ ನಿರ್ಮಿಸಲು ಕೆಲ ಸದಸ್ಯರ ಅಪಸ್ವರದ ಮಧ್ಯೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಉಳಿಯಾರಗೋಳಿ ಪ್ರದೇಶದಲ್ಲಿ ಘಟಕ ನಿರ್ಮಿಸುವ ಬಗ್ಗೆ ಪುರಸಭೆ ನಿರ್ಣಯ ಕೈಗೊಂಡಿತ್ತಾದರೂ ಕೆಲ ಮಂದಿ ಆ ಪ್ರದೇಶ ದೇವರ ಸಾನಿಧ್ಯ ಎಂಬುದಾಗಿ ವಿರೋಧ ವ್ಯಕ್ತ ಪಡಿಸಿದ್ದರಿಂದ ಆ ಭಾಗದಲ್ಲಿ ಘಟಕ ನಿರ್ಮಿಸುವ ಯತ್ನವನ್ನು ಕೈಬಿಟ್ಟು, ಕಾಪು ಪುರಸಭೆಯ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ರಾಯಪ್ಪರ ಸೂಚನೆಯಂತೆ ಮುಂದೆ ನಿರ್ಮಾಣಗೊಳ್ಳಲಿರುವ ಪುರಸಭೆಯ ಕಟ್ಟಡದ ಮುಂಭಾಗದಲ್ಲೇ ಅತ್ಯಾಧುನಿಕವಾದ ಘಟಕ ನಿರ್ಮಿಸಲಾಗುವುದೆಂದರು.

ಕಾಪುವಿನ ಮೆಸ್ಕಾಂ ಕಟ್ಟಡದ ಹಿಂಭಾಗದಲ್ಲಿ ಅದೇಷ್ಟೋ ವರ್ಷಗಳಿಂದ ತೆರೆದ ಮಾದರಿಯಲ್ಲಿ ಹರಿದು ಹೋಗುತ್ತಿರುವ ಕಾಪು ಪೇಟೆ ಪ್ರದೇಶದ ಹೋಟೆಲ್, ಬಾರ್ ಹಾಗೂ ವಾಣಿಜ್ಯ ಸಂಕೀರ್ಣಗಳ ತ್ಯಾಜ್ಯ ನೀರಿನಿಂದಾಗಿ ಜನರು ನಿತ್ಯ ಬವಣೆ ಪಡುತ್ತಿದ್ದು, ಪ್ರಭಾವಿಗಳ ಪ್ರಭಾವದಿಂದಾಗಿ ಈ ಬಗ್ಗೆ ಯಾವುದೇ ರೀತಿಯಲ್ಲಿ ಕ್ರಮ ಕೈಗೊಳ್ಳದಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಭಣಗೊಂಡಿದ್ದು, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸದಸ್ಯರೊಬ್ಬರು ಅಧಿಕಾರಿಯ ಗಮನಕ್ಕೆ ತಂದಿದ್ದು, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಪುರಸಭಾಧಿಕಾರಿ ಭರವಸೆ ನೀಡಿದರು.

ಕಾಪು ಬೀಚ್ ಪ್ರದೇಶ ಸಂಜೆಯಾಗುತ್ತಿದಂತೆ ಯಾವುದೇ ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಕತ್ತಲಾವರಿಸುತ್ತಿದ್ದು, ಪ್ರವಾಸಿಗರಿಗೆ ಬಹಳ ತೊಂದರೆಯಾಗುತ್ತಿದೆ ಈ ಬಗ್ಗೆ ಪುರಸಭೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯ ನಾಗೇಶ್ ಒತ್ತಾಯಿಸಿದ್ದು, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಾದುದು ಬೀಚ್ ಉಸ್ತುವಾರಿ ಪಡೆದವರ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಅವರಿಗೆ ಸೂಚನೆ ನೀಡಲಾಗುವುದು ಎಂಬುದಾಗಿ ಅಧಿಕಾರಿ ಉತ್ತರಿಸಿದರು.

ಮಾತಿನ ಹೊಂದಾಣಿಕೆಯ ಕೊರತೆಯಿಂದ ಸದಸ್ಯರೊಬ್ಬರು ಏರುಧ್ವನಿಯಿಂದ ಮಾತಾಡಿದ್ದರಿಂದ ಪುರಸಭೆಯ ಸದಸ್ಯರು ಹಾಗೂ ನಾಮ ನಿರ್ದೇಶಿತ ಸದಸ್ಯರ ಮಧ್ಯೆ ಏರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು, ಅಂತಿಮವಾಗಿ ಶಾಸಕ ಸೊರಕೆ ಹಾಗೂ ಅಧಿಕಾರಿ ರಾಯಪ್ಪರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ.