`ಪ್ರತ್ಯೇಕಿಸದ ತ್ಯಾಜ್ಯ ಸಂಗ್ರಹಿಸಬೇಡಿ’ ಎಂದ ಮೇಯರ್ ಆದೇಶಕ್ಕೆ ಕಾರ್ಪೊರೇಟರ್ ಕಿಡಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರತ್ಯೇಕಿಸದ ತ್ಯಾಜ್ಯವನ್ನು ಸಂಗ್ರಹಿಸಬೇಡಿ ಎಂದು ತ್ಯಾಜ್ಯ ಸಂಗ್ರಹ ಏಜೆನ್ಸಿಗಳಿಗೆ ಮೇಯರ್ ಕವಿತಾ ಸನಿಲ್ ಆದೇಶಿಸಿರುವುದನ್ನು ಬಿಜೆಪಿ ಕಾರ್ಪೊರೇಟರ್ ಮತ್ತು ಮನಪಾ ಕೌನ್ಸಿಲ್ ವಿರೋಧ ಪಕ್ಷದ ಮಾಜಿ ನಾಯಕಿ ರೂಪಾ ಡಿ ಬಂಗೇರ ತೀವ್ರವಾಗಿ ಟೀಕಿಸಿದ್ದು, ಇದೊಂದು ಅವಸರದ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಪ್ರಸಕ್ತ ಅಸ್ಥಿತ್ವದಲ್ಲಿರುವ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಯೇ ಹಲವು ಸಮಸ್ಯೆಗಳಿಂದ ಕೂಡಿದ್ದು, ತ್ಯಾಜ್ಯ ನಿರ್ವಹಣೆಯೇ ಸಮರ್ಪಕವಾಗಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ ಮತ್ತು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತ್ಯಾಜ್ಯ ನಿರ್ವಹಣಾ ಏಜೆನ್ಸಿಯು ಮನಪಾದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದ್ದರೂ ಮುಖ್ಯ ರಸ್ತೆಯಲ್ಲಿ ಸುರಿಯಲಾಗಿರುವ ಕಸಗಳನ್ನು ಸಂಗ್ರಹಿಸುತ್ತಿಲ್ಲ. ಈ ಹಂತದಲ್ಲಿ ಒಂದು ವೇಳೆ ಒಣ ಮತ್ತು ತೇವದ ತ್ಯಾಜ್ಯ ಪ್ರತ್ಯೇಕಿಸುವುದು ಕಡ್ಡಾಯ ಮಾಡಿದರೆ, ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುವಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೂಪಾ ಹೇಳಿದ್ದಾರೆ.

ಹಿಂದಿನ ಮೇಯರ್ ತ್ಯಾಜ್ಯ ಪ್ರತ್ಯೇಕಿಸಲು ಪ್ರತ್ಯೇಕ ಚೀಲಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದ್ದರು ಮಾತ್ರವಲ್ಲ ಬಜೆಟ್ ಕೂಡ ಜಾರಿಗೊಳಿಸಿದ್ದರು. ಆದರೆ ಮೇಯರ್ ಹರಿನಾಥ್ ಉತ್ತರಾಧಿಕಾರಿ ಅವಧಿ ಕೂಡ ಮುಗಿಯುತ್ತಾ ಬಂದರೂ ಇದುವರೆಗೆ ಭರವಸೆ ಭರ್ತಿಯಾಗಿಲ್ಲ ಎಂದು ರೂಪಾ ಟೀಕಿಸಿದರು.

ತ್ಯಾಜ್ಯ ಪ್ರತ್ಯೇಕತೆ ಕಡ್ಡಾಯ ಮಾಡುವ ಬದಲಿಗೆ ಈ ಬಗ್ಗೆ ವಾರ್ಡ್ ಮಟ್ಟದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಘನತ್ಯಾಜ್ಯ ನಿರ್ವಹಣೆಯು ಇಂಜಿನಿಯರುಗಳು, ತ್ಯಾಜ್ಯ ನಿರ್ವಹಣೆ ಕಾಂಟ್ರಾಕ್ಟರುಗಳು ಮತ್ತು ಕಾರ್ಪೊರೇಷನ್ ಸದಸ್ಯರ ಜೊತೆಗೆ ಸಮಾಲೋಚನೆ ನಡೆಸುವ ಮೂಲಕ ಸರಿಪಡಿಸಬೇಕು. ನಾಗರಿಕರನ್ನು ಹೆದರಿಸುವ ಕೆಲಸದಿಂದ ಕಾರ್ಯ ಕೈಗೂಡದು ಎಂದು ರೂಪಾ ಬಂಗೇರ ಹೇಳಿದರು.