ಯಾರನ್ನೂ ಕೊಂದಿಲ್ಲ : ಪ್ರತಿಭಾ

ಮಂಗಳೂರು : ಸಾಯಲು ಮನಸ್ಸಿದ್ದವರು ಸಂಘಪರಿವಾರಕ್ಕೆ ಸೇರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಪೋರೇಟರ್ ಪ್ರತಿಭಾ ಕುಳಾಯಿ ಇದೀಗ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಪ್ರತಿಭಾ ನೀಡಿದ್ದ ಹೇಳಿಕೆ ಪ್ರಚೋದನಕಾರಿಯಾಗಿದ್ದ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಇನ್ನೊಂದೆಡೆ ಇದೀಗ ತಾನು ನೀಡಿದ್ದ ಹೇಳಿಕೆಗೆ ಪ್ರತಿಭಾ ಸಮರ್ಥನೆ ನೀಡುವ ಕೆಲಸ ಮಾಡುತ್ತಿದ್ದಾರೆ.

ಪ್ರತಿಭಾ ಹೇಳಿಕೆ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇವರ ಹೇಳಿಕೆಗೆ ವ್ಯಾಪಕ ಟೀಕೆ ಎದುರಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ತನಗೆ ಮತ್ತು ಮನೆಮಂದಿಗೆ ಜೀವ ಬೆದರಿಕೆ, ಅಶ್ಲೀಲ ಪದ ಪ್ರಯೋಗ ಮಾಡಿ ಕರೆಗಳು ಬರುತ್ತಿರುವುದಾಗಿ ಪ್ರತಿಭಾ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅಲವತ್ತುಕೊಂಡಿದ್ದಾರೆ.

ಅಲ್ಲದೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಮೊಯ್ದೀನ್ ಬಾವ ಮತ್ತು ಪ್ರತಿಭಾ ಕುಳಾಯಿ ನಡುವೆ ಅನೈತಿಕ ಸಂಬಂಧ ಇರುವ ಸಂದೇಶಗಳನ್ನು ಕೂಡಾ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಲಾಗಿದ್ದು, ಪ್ರತಿಭಾ ಕುಳಾಯಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

“ನಾನು ಯಾರನ್ನೂ ಕೊಂದಿಲ್ಲ. ಸತ್ಯವನ್ನೇ ಹೇಳಿದ್ದೇನೆ. ನಾನು ನೀಡಿದ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಯಾರಿಗೂ ಅಂಜುವ ಪ್ರಶ್ನೆ ಇಲ್ಲ. ನನ್ನ ಮಾತು ಸಹಿಸದ ಕೆಲವು ಮಂದಿ ನನ್ನ ವಿರುದ್ಧ ಪಿತೂರಿ ನಡೆಸಿ ನನ್ನ ಇಮೇಜ್ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಇವರ ಕೃತ್ಯದ ಹಿಂದೆ ಇನ್ಯಾರದ್ದೋ ಕೈವಾಡ ಇದೆ” ಎಂದು ಪ್ರತಿಭಾ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ತನ್ನ ಮಾನಹಾನಿ ಮಾಡುತ್ತಿರುವವರ ವಿರುದ್ಧ ನಗರ ಪೊಲೀಸ್ ಕಮಿಷನರ್‍ಗೆ ದೂರು ನೀಡುವುದಾಗಿ ಅವರು ಹೇಳಿದ್ದಾರೆ.

 

 

LEAVE A REPLY