ಪಡುಬಿದ್ರಿ ಬೀಚಲ್ಲಿ ಭಿನ್ನಕೋಮು ಜೋಡಿ

ಸಾಂದರ್ಭಿಕ ಚಿತ್ರ

ಪೊಲೀಸ್ ಎಚ್ಚರಿಕೆ !

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಅನ್ಯಕೋಮಿನ ಜೋಡಿಯೊಂದು ಪಡುಬಿದ್ರಿ ಬೀಚಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನ್ನು ಗಮನಿಸಿದ ಪರಿವಾರ ಸಂಘಟನೆಯ ಸದಸ್ಯರು ಅವರನ್ನು ಪಡುಬಿದ್ರಿ ಪೊಲೀಸರಿಗೊಪ್ಪಿಸಿದ್ದಾರೆ.

ಮುಲ್ಕಿಯ ಕೊಲ್ನಾಡುವಿನಲ್ಲಿ ಅಟೋ ಚಾಲಕನಾಗಿರುವ 21 ವರ್ಷದ ಮುಸ್ಲಿಂ ಯುವಕ ಹಾಗೂ ಕಾರ್ನಾಡು ಮೂಲದ ಹಿಂದೂ ಯುವತಿಯೇ ಸಿಕ್ಕಿಬಿದ್ದ ಜೋಡಿ. ಆಟೋ ಓಡಿಸುತ್ತಿದ್ದು, ಯಾವ ಹೊತ್ತಿಗೆ ಕರೆದರೂ ಬಾಡಿಗೆಗಾಗಿ ಬರುತ್ತಿದ್ದ ಈ ಯುವಕ, ಅದೇ ಮನೆಯ ಯುವತಿಯನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ಇಬ್ಬರ ಮಧ್ಯೆ ಮೊಬೈಲ್ ಮೆಸೇಜ್ ಚಾಲ್ತಿಯಲ್ಲಿದ್ದು, ಯುವತಿ ಮೆಸೇಜ್ ಕಳುಹಿಸದಿದ್ದಾಗ ಆಕೆಯ ಮನೆಮಂದಿಗೆ ಕರೆ ಮಾಡಿ ಮೆಸೇಜ್ ಕಳುಹಿಸಲು ಹೇಳಿ ಎಂದಾಗ ಮನೆಮಂದಿ ಆತನಿಗೆ ಚೆನ್ನಾಗಿ ಉಗಿದು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದರೂ ಇವರ ಪ್ರಣಯದಾಟ ಮುಂದುವರಿದಿತ್ತು.

ಈ ಜೋಡಿಯನ್ನು ಹಿಡಿದು ವಿಚಾರಿಸಿದಾಗ “ನಾನು ಹಿಂದೂ, ನನ್ನ ಹೆಸರು ರಮೇಶ್” ಎಂಬುದಾಗಿ ಆತ ಸುಳ್ಳು ಹೇಳಿದ್ದು, ಆತನನ್ನು ಸಮರ್ಥಿಸಲು ಯುವತಿ ಕೂಡಾ ಯತ್ನಿಸಿದ್ದಾಳೆ ಎಂಬುದಾಗಿ ಸಂಘಟನೆಯ ಪ್ರಮುಖರು ಹೇಳಿದ್ದಾರೆ.  ಠಾಣೆಗೆ ಒಪ್ಪಿಸಿದ ಬಳಿಕ ಇಬ್ಬರ ಮನೆಮಂದಿಯನ್ನು ಠಾಣೆಗೆ ಕರೆಯಿಸಿ ಅವರ ಸಮ್ಮುಖದಲ್ಲೇ ಮುಚ್ಚಳಿಕೆ ಬರೆಯಿಸಿ ಎಚ್ಚರಿಸಿ ನೀಡಿದ ಪೊಲೀಸರು ಅವರನ್ನು ಮನೆಮಂದಿಯೊಂದಿಗೆ ಕಳುಹಿಸಿಕೊಟ್ಟರು.