ಶಾಲಾ ವಾಹನಗಳು ನಿಯಮ ಪಾಲಿಸದಿದ್ದರೆ ಕ್ರಮ

ವಿದ್ಯಾ ಸಂಸ್ಥೆಗಳಿಗೆ ಕಾಪು ಪೊಲೀಸ್ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಲೇ ಇದೆ. ಆ ನಿಟ್ಟಿನಲ್ಲಿ ಶಾಲಾ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಹಾಗೂ ವಾಹನಗಳು ನಿಯಮ ಬದ್ಧವಾಗಿರಬೇಕು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರಗಿಸುವುದಾಗಿ ವೃತ್ತ ನಿರೀಕ್ಷಕ ಹಾಲಮೂರ್ತಿರಾವ್ ಎಚ್ಚರಿಸಿದರು.

ಕಾಪುವಿನ ಜೇಸಿ ಭವನದಲ್ಲಿ ಜೇಸಿಐ ಸಂಸ್ಥೆ ಆಯೋಜಿಸಿದ ಶಾಲಾ ವಾಹನ ಚಾಲಕರಿಗೆ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

“ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಸಂಭಾಷಣೆ ನಡೆಸುವುದು, ಸಂಚಾರ ನಿಯಮಗಳನ್ನು ಪಾಲಿಸದಿರುವುದು. ಈ ಮೂರು ಅಪಘಾತಕ್ಕೆ ಮೂಲ ಕಾರಣವಾಗಿದೆ. ಶಾಲಾ ವಾಹನ ಚಾಲಕರು ತಮ್ಮ ವೈಯಕ್ತಿಕ ಯಾವುದೇ ಸಮಸ್ಯೆಗಳಿದ್ದರೂ ವಾಹನ ಹತ್ತಿದ ತಕ್ಷಣ ಅದನ್ನು ಮರೆತು ಚಾಲನೆಯ ಮೇಲೆ ಗಮನ ಹರಿಸತಕ್ಕದ್ದು, ತಾವು ಚಲಾಯಿಸುತ್ತಿರುವ ವಾಹನದಲ್ಲಿ ಅನೇಕ ಕುಟುಂಬಗಳ ಭವಿಷ್ಯ ಅಡಗಿದೆ ಎಂಬುದನ್ನು ನೀವು ಪ್ರಥಮವಾಗಿ ತಿಳಿದುಕೊಳ್ಳಬೇಕು” ಎಂದರು.

“ಸುಪ್ರೀಂ ಕೋರ್ಟ್ ಆದೇಶದಂತೆ ಶಾಲಾ ವಾಹನದ ಬಣ್ಣ ಸಹಿತ ವಿವಿಧ ನಿಯಮ ನಿಬಂಧನೆಗಳಿದ್ದು ಅದನ್ನು ಪಾಲಿಸತಕ್ಕದ್ದು, ಅದರ ಉಲ್ಲಂಘನೆಯಾದರೆ ಮಕ್ಕಳ ಹಿತದೃಷ್ಠಿಯಿಂದ ಮುಂದಿನ ದಿನದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಆ ನಿಟ್ಟಿನಲ್ಲಿ ಇಲ್ಲಾ ವಿದ್ಯಾಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು” ಎಂದರು.

ಕಾಪು ವೃತ್ತದ ಹತ್ತಾರು ಶಾಲೆಗಳ ನೂರಕ್ಕೂ ಅಧಿಕ ಚಾಲಕ, ನಿರ್ವಾಹಕರು ಈ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.