ಉಡುಪಿ ಪೇದೆ ಅಮಾನತು ರದ್ದು

ಉಡುಪಿ : ಪತ್ನಿಗೆ ಚುಡಾಯಿಸಿದನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಅಮಾನತು ಶಿಕ್ಷೆಗೊಳಗಾಗಿದ್ದ ಮಲ್ಪೆಯ ಪೊಲೀಸ್ ಕಾನ್ಸ್‍ಟೆಬಲ್ ಪ್ರಕಾಶ್ ಅವರನ್ನು ಕರ್ತವ್ಯಕ್ಕೆ ಮರು ಸೇರ್ಪಡೆಗೊಳಿಸಲಾಗಿದೆ. ಇವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಬಾಲಕೃಷ್ಣ ತಿಳಿಸಿದ್ದಾರೆ.

ಪ್ರಕಾಶ್ ಅವರು ಸಚಿವ ಪ್ರಮೋದ್ ಮಧ್ವರಾಜ್ ಅವರ ಕಂಪೆನಿಯ ಕಾರು ಚಾಲಕ ಕುಮಾರ್ ಅವರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಅಮಾನತು ಮಾಡಲಾಗಿತ್ತು. ಅಲ್ಲದೆ ಈ ಪ್ರಕರಣ ಜಿಲ್ಲೆಯಾದ್ಯಂತ ಭಾರೀ ಕುತೂಹಲಕ್ಕೂ ಕಾರಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಉಡುಪಿ ಎಸ್ ಪಿ ಬೆಂಗಳೂರಿಗೆ ಕರೆಸಿಕೊಂಡು ಸಮಗ್ರ ಮಾಹಿತಿಯನ್ನೂ ಪಡೆದಿದ್ದರು.

ಹಿರಿಯ ಮೇಲಧಿಕಾರಿಗಳ ಸೂಚನೆಯಂತೆ ಪ್ರಕಾಶ್ ಅವರ ಅಮಾನತು ಆದೇಶವನ್ನು ಹಿಂಪಡೆದು ಅವರನ್ನು ಕಾರ್ಕಳ ನಗರ ಠಾಣೆಗೆ ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ತನ್ನನ್ನು ಮಲ್ಪೆ ಠಾಣೆಯಿಂದ ಬೇರೆ ಠಾಣೆಗೆ ವರ್ಗಾವಣೆ ಮಾಡುವಂತೆ ಪ್ರಕಾಶ್ ಅವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕಾರ್ಕಳ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ತನ್ನ ಪತ್ನಿಗೆ  ಅವಮಾನ ಹಾಗೂ ತನ್ನನ್ನು ಅಮಾನತು ಮಾಡಿರುವ ವಿಚಾರವನ್ನು ಪೇದೆ ಪ್ರಕಾಶ್

ಅವರು ರಾಜ್ಯ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ ಶಶಿಧರ್ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ನಡೆದ ಮಾತುಕತೆಯ ಪರಿಣಾಮ, ಅಧಿಕಾರಿಗಳು ಶಶಿಧರ್ ಅವರ ಮನವೊಲಿಕೆ ಮಾಡಿದ್ದು, ಪ್ರತಿಭಟನೆಯನ್ನು ಕೈಬಿಡಲಾಗಿದೆ.

“ಈ ತನಿಖೆ ಸಮರ್ಪಕವಾಗಿ ನಡೆದಿಲ್ಲ. ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕು ಎಂದು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಲಿದ್ದೇವೆ” ಎಂದು ವಿ ಶಶಿಧರ್ ಹೇಳಿದ್ದಾರೆ.