ಅತ್ಯಾಚಾರಿಯ ಡಿಎನ್ಎ ಪರೀಕ್ಷೆಗೆ ಅನುಮತಿ ಕೋರಿದ ಪೊಲೀಸರು

ಬೆಂಗಳೂರು : ಕಳೆದ ತಿಂಗಳು 13 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಆರೋಪದ ಮೇಲೆ ಬಂಧಿತನಾಗಿರುವ ಕಲಬುರ್ಗಿಯ  28 ವರ್ಷದ ಮಲ್ಲಿಕಾರ್ಜುನ ಸಂತ್ರಸ್ತೆಯನ್ನು ಕನಿಷ್ಠ ಮೂರು ಬಾರಿ ಅತ್ಯಾಚಾರಗೈದಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಇದೀಗ ಪೊಲೀಸರು ಆರೋಪಿಯ ಡಿಎನ್‍ಎ ಪರೀಕ್ಷೆಗೆ ಅನುಮತಿ ಕೋರಿದ್ದು ಆತ ಅತ್ಯಾಚಾರ ನಡೆಸಿದ ಸ್ಥಳದಲ್ಲಿ ಪತ್ತೆಯಾದ ಬಟ್ಟೆಗಳಲ್ಲಿರುವ ವೀರ್ಯದ ಕಲೆಗಳು ಆತನದ್ದೇ ಎಂದು ಈ ಮೂಲಕ ತಿಳಿಯಲು ಪ್ರಯತ್ನಿಸಲಿದ್ದಾರೆ.

ಆರೋಪಿ ಮಾರ್ಚ್ 2ರಂದು ಇನ್ನೊಬ್ಬ ಬಾಲಕನೊಂದಿಗೆ ಬಾಲಕಿಯ ಮನೆಗೆ ಬಂದು ಅವರನ್ನು ಮದುವೆಯ ಔತಣಕೂಟಕ್ಕೆ ಕರೆದೊಯ್ಯುವುದಾಗಿ ಹೇಳಿ ಅಲ್ಲಿಂದ ಕರೆದೊಯ್ದು ದಾರಿಯಲ್ಲಿ ಕಾಂಡೊಮ್ ಒಂದನ್ನೂ ಖರಿಧಿಸಿ ಅದನ್ನು ಬ್ಯಾಂಡೇಜ್ ಎಂದು ಬಾಲಕಿಗೆ ಸುಳ್ಳು ಹೇಳಿ ನಂತರ ಆಕೆಯನ್ನು ರಜನುಕುಂಠೆಯಲ್ಲಿರುವ ನಿರ್ಜನ ಪ್ರದೇಶದಲ್ಲಿರುವ ಪಾಳು ಬಿದ್ದಿರುವ ಕಟ್ಟಡವೊಂದಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ನಡೆಸಿದ್ದಾನೆನ್ನಲಾಗಿದೆ. ಆಕೆಗೆ ಚಾಕೊಲೇಟುಗಳನ್ನೂ ನೀಡಿ ಪುಸಲಾಯಿಸಿ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದನೆಂದೂ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಐದು ವರ್ಷಗಳ ಹಿಂದೆ ಕಲಬುರ್ಗಿಯಿಂದ ಬೆಂಗಳೂರಿಗೆ ನಟನಾಗಬೇಕೆಂಬ ಹಂಬಲದಿಂದ ಆಗಮಿಸಿದ್ದನೆನ್ನಲಾಗಿದ್ದು ಯಾವುದೇ ಅವಕಾಶಗಳು ಸಿಗದೆ ಕೈಚೆಲ್ಲಿ ಕುಳಿತಿದ್ದ. ಆರೋಪಿ  ಹಲವಾರು ಕನ್ನಡ ನಟರೊಂದಿಗೆ ತೆಗೆದಿರುವ ಸೆಲ್ಫೀಗಳನ್ನೂ  ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇದೀಗ ಪೊಲೀಸರು ಸಂತ್ರಸ್ತೆ ಮತ್ತಾಕೆಯ ಕುಟುಂಬದ ಸದಸ್ಯರಿಂದ ಹೇಳಿಕೆಗಳನ್ನು ಪಡೆದು ಆರೋಪಿ ವಿರುದ್ಧ ಪ್ರಬಲ ಚಾರ್ಜ್ ಶೀಟ್ ದಾಖಲಿಸಲು ತೀವ್ರ ಪ್ರಯತ್ನ ಮುಂದುವರಿಸಿದ್ದಾರೆ.

LEAVE A REPLY