ಬಶೀರ್ ಹಂತಕರು ಎಸೆದ ಮಾರಕಾಸ್ತ್ರಕ್ಕೆ ನೇತ್ರಾವತಿಯಲ್ಲಿ ಪೊಲೀಸರ ಹುಡುಕಾಟ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಕೊಟ್ಟಾರ ಚೌಕಿಯಲ್ಲಿ ಆಕಾಶಭವನ ನಿವಾಸಿ ಬಶೀರ್ ಹತ್ಯೆ ನಡೆಸಿದ ಹಂತಕರು ಪೊಲೀಸರಿಗೆ ಸಿಕ್ಕಿ ಬಿದಿದ್ದಾರೆಯಾದರೂ ಆರೋಪಿಗಳು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ಇನ್ನೂ ಸಿಕ್ಕಿಲ್ಲ.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸಂದೇಶ್, ಧನುಷ್, ಸೃಜಿತ್ ಮತ್ತು ಕಿಶನ್

ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಆರೋಪಿಗಳೂ ಬಶೀರ್ ಅವರನ್ನು ಕೊಟ್ಟಾರ ಚೌಕಿ ಬಳಿ ರಾತ್ರಿ ವೇಳೆ ಇರಿದು ಪರಾರಿಯಾಗಿದ್ದರು. ಜೀವನ್ಮರಣ ಹೋರಾಟ ನಡೆಸಿದ ಬಶೀರ್ ನಾಲ್ಕು ದಿನಗಳ ಬಳಿಕ ಚಿಕತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಘಟನೆ ಬಳಿಕ ಈ ನಾಲ್ವರು ಆರೋಪಿಗಳು ಪಂಪ್ವೆಲ್ ತೊಕ್ಕೊಟ್ಟು ತಲಪಾಡಿ ಮೂಲಕ ಕೇರಳದ ಮಂಜೇಶ್ವರ ಕಡೆಗೆ ಎಸ್ಕೇಪ್ ಆಗಿದ್ದರು. ಈ ಸಂದರ್ಭ ಇವರು ನೇತ್ರಾವತಿ ಸೇತುವೆಯಲ್ಲಿ ತಮ್ಮ ಬಳಿ ಇದ್ದ ಮೊಬೈಲ್ ಫೋನ್, ತಲ್ವಾರುಗಳನ್ನು ನೀರಿಗೆ ಎಸೆದು ಹೋಗಿದ್ದರು.

ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಅವರು ಸತ್ಯ ಸಂಗತಿ ಬಾಯ್ಬಿಟ್ಟಿದ್ದು, ಬುಧವಾರದಂದು ನದಿಯಲ್ಲಿ ತಣ್ಣೀರುಬಾವಿ ಮುಳುಗುತಜ್ಞರನ್ನು  ಬಳಸಿಕೊಂಡು ಮಾರಕಾಸ್ತ್ರ ಮತ್ತು ಮೊಬೈಲಿಗೆ ಹುಡುಕಾಟ ನಡೆಸಲಾಯಿತು.

ನೇತ್ರಾವತಿಯಲ್ಲಿ ಪೊಲೀಸರು ಶೋಧ ನಡೆಸುತ್ತಿರುವುದನ್ನು ನೋಡಲು ಬಹಳಷ್ಟು ಮಂದಿ ಕುತೂಹಲಿಗರು ಸೇತುವೆ ಮೇಲ್ಭಾಗದಲ್ಲಿ ಸೇರಿದ್ದರು. ಇದೇ ಸಂದರ್ಭದಲ್ಲಿ ಪೊಲೀಸರು ಇಲ್ಲಿಗೆ ಕರೆತಂದ ಆರೋಪಿಯೊಬ್ಬ ಸೇತುವೆಯ ಮೇಲ್ಭಾಗದಿಂದ ಕೆಳಕ್ಕೆ ಧುಮುಕಿ ಎಸ್ಕೇಪ್ ಆಗಿದ್ದಾನೆ ಎನ್ನುವ ಗಾಳಿ ಸುದ್ದಿಯೂ ಹರಡಿ ಕೊಂಚ ಕಾಲ ಭಾರೀ ಆತಂಕದ ವಾತಾವರಣ ಉಂಟಾಯಿತು. ಬಳಿಕ ಇದು ಸುಳ್ಳು ಸುದ್ದಿ ಎಂದು ತಿಳಿದುಬಂತು.

 

LEAVE A REPLY