ಥಾಣೆ ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಶಾಮೀಲು ಆರೋಪ, ಎಫೈಆರ್

ಮುಂಬೈ : ಕಳೆದ ವರ್ಷ ಆಗಸ್ಟಿನಲ್ಲಿ 21 ವರ್ಷದ ಅಟೋಮೊಬೈಲ್ ಇಂಜಿನಿಯರೊಬ್ಬ ಪೊಲೀಸ್ ಕಸ್ಟಡಿಯಿಂದ ಬಿಡುಗಡೆಗೊಂಡ ಬಳಿಕ ಮನೆಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದ ಪ್ರಕರಣದ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಥಾಣೆ ಪೊಲೀಸ್ ಟಿಟ್ವಾಲ ಪೊಲೀಸ್ ಠಾಣೆಯ ನಾಲ್ವರು ಪೊಲೀಸರ ವಿರುದ್ಧ ಎಫೈಆರ್ ದಾಖಲಿಸಿಕೊಂಡಿದೆ.

2017 ಆಗಸ್ಟ್ 23ರಂದು ಮಿತೇಶ್ ಜತ್ಪಾತ್ ಥಾಣೆಯ ಟಿಟ್ವಾಲದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೈಕ್ ಕಳುವು ಪ್ರಕರಣರಲ್ಲಿ ಬಂಧಿತನಾಗಿದ್ದ ಮಿತೇಶಗೆ (ಆಗಸ್ಟ್ 21-22ರಂದು ರಾತ್ರಿ) ಪೊಲೀಸರು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದರು ಎಂದು ಆತನ ತಾಯಿ ಪುಷ್ಪಾ ಹೈಕೋರ್ಟಿಗೆ ದೂರಿಕೊಂಡಿದ್ದರು. ಪೊಲೀಸರು ನೀಡಿದ ಹಿಂಸೆಯಿಂದ ಮಿತೇಶಗೆ ಠಾಣೆಯಿಂದ ಹೊರಗೆ ನಡೆದುಕೊಂಡು ಬರಲಾಗಿಲ್ಲ. 50,000 ರೂ ನೀಡದೆ ಹೋದರೆ ಮಿತೇಶ್ ವಿರುದ್ಧ ಸುಳ್ಳು ಕೇಸು ಜಡಿಯಲಾಗುವುದು ಎಂದು ಪೊಲೀಸರು ಬೆದರಿಸಿದ್ದರು ಎಂದು ಆತನ ಪಾಲಕರು ಆರೋಪಿಸಿದ್ದಾರೆ.