ಪೋಲಿಸರಿಂದ ಅಕ್ರಮ ಫ್ಲೆಕ್ಸ್ ತೆರವು

ಬದಿಯಡ್ಕ ಪೇಟೆಯಲ್ಲಿ ಫ್ಲೆಕ್ಸ್ ತೆರವುಗೊಳಿಸಲಾಯಿತು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸಾರ್ವಜನಿಕವಾಗಿ ಅಶಾಂತಿಗೆ ಕಾರಣವಾಗುವ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರುಗಳನ್ನು ಶುಕ್ರವಾರ ಬದಿಯಡ್ಕದಲ್ಲಿ ಪೋಲಿಸರು ತೆರವುಗೊಳಿಸಿದರು.

ಇತರ ಪ್ರದೇಶಗಳಿಗಿಂತ ಭಿನ್ನವಾಗಿ ಬದಿಯಡ್ಕ ಪೇಟೆ ಸಹಿತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಅನಧಿಕೃತ ಫ್ಲೆಕ್ಸ್-ಬ್ಯಾನರುಗಳಿಗೆ ನಿಯಂತ್ರಣ ಹೇರಲಾಗಿದೆ. ಎರಡು ವರ್ಷಗಳ ಹಿಂದೆ ಬದಿಯಡ್ಕ ಗ್ರಾಮ ಪಂಚಾಯತಿಯ ಸರ್ವ ಪಕ್ಷ ಸಭೆ ಮತ್ತು ಪೋಲಿಸ್ ಇಲಾಖೆಯ ನೇತೃತ್ವದಲ್ಲಿ ಈ ಅದ್ವಾನವನ್ನು ಜಾರಿಗೊಳಿಸಲಾಗಿತ್ತು. ಆದರೆ ಅಧಿಕೃತರ ಆದೇಶವನ್ನು ಗಾಳಿಗೆ ತೂರಿ ಎಲ್ಲೆಡೆ ಬ್ಯಾನರ್, ಪ್ಲೆಕ್ಸುಗಳು ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಪೋಲಿಸ್ ಇಲಾಖೆ ಪ್ಲೆಕ್ಸ್ ತೆರವಿನ ಕ್ರಮ ಕೈಗೊಂಡಿತ್ತು. ಆದರೆ ತೆರವು ಕೈಗೊಂಡು ತಿಂಗಳು ಕಳೆಯುತ್ತಿರುವಂತೆ ಮಾಮೂಲಿನಂತೆ ಪ್ಲೆಕ್ಸ್ ಪ್ರತ್ಯಕ್ಷಗೊಂಡು ಅಧಿಕೃತರ ಆದೇಶಕ್ಕೆ ಕವಡೆ ಕಿಮ್ಮತ್ತಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಆದರೂ ಮೌನವಾಗಿದ್ದ ಪೋಲಿಸ್ ಇಲಾಖೆ ಇದೀಗ ನಾಗರಿಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೆ ಅನಧಿಕೃತ ಫ್ಲೆಕ್ಸ್ ತೆರವಿಗೆ ಚಾಲನೆ ನೀಡಿದೆ.