ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ

ಅಕ್ರಮ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು

120 ಕೇಜಿ ದನದ ಮಾಂಸ ವಶ,
ಇಬ್ಬರ ಬಂಧನ, 6 ಮಂದಿ ಪರಾರಿ

ನಮ್ಮ ಪ್ರತಿನಿಧಿ ವರದಿ
ಕಾರ್ಕಳ : ತಾಲೂಕಿನ ತೆಳ್ಳಾರು ಬಾಡಂಕೋಡಿ ಎಂಬಲ್ಲಿನ ಹಾಡಿಯೊಂದರಲ್ಲಿ ದನಗಳನ್ನು ಮಾಂಸಕ್ಕಾಗಿ ಅಕ್ರಮವಾಗಿ ಕಡಿಯುತ್ತಿದ್ದಾರೆ ಎಂದು ಬಜರಂಗದಳದ ಕಾರ್ಯಕರ್ತರು ನೀಡಿರುವ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸ್ ತಂಡ ಗುರುವಾರ ಮಧ್ಯಾಹ್ನ ದಾಳಿ ನಡೆಸಿ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶಾಹುಲ್ ಹಾಗೂ ಮುಖ್ತಾರ್ ಎಂಬವರನ್ನು ಬಂಧಿಸಿ ಬಂಧಿತರಿಂದ ಸುಮಾರು 120 ಕೇಜಿ ದನದ ಮಾಂಸ ಹಾಗೂ ಕತ್ತಿ ಮುಂತಾದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಸುಲೈಮಾನ್, ಆದಿಲ್, ಆಕಿಫ್, ಸಾವಲ್, ಇಮ್ತಿಯಾಜ್ ಹಾಗೂ ಸಾದತ್ ಎಂಬವರು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳು ಕಳೆದ ಹಲವು ವರ್ಷಗಳಿಂದ ರಾತ್ರಿ ವೇಳೆ ದನಗಳನ್ನು ಕದ್ದು ತಂದು ಬಳಿಕ ನಿರ್ಜನ ಪ್ರದೇಶವಾದ ಬಾಡಂಕೋಡಿ ನಿರ್ಜನ ಪ್ರದೇಶದ ಹಾಡಿಯಲ್ಲಿ ಕಡಿದು ಮಾಂಸ ಮಾರಾಟ ಮಾಡುವ ದಂಧೆಯನ್ನು ಮಾಡಿಕೊಂಡಿದ್ದರು. ಈ ಕುರಿತು ಸ್ಥಳೀಯರು ಹಾಗೂ ಬಜರಂಗದಳದವರು ಪೊಲೀಸರಿಗೆ ವಿಷಯ ತಿಳಿಸಿ ದಾಳಿ ನಡೆಸಿದ್ದಾರೆ. ಒಂದು ವರ್ಷದ ಹಿಂದೆ ಈ ಪರಿಸರದಲ್ಲಿ ಭಾರೀ ಪ್ರಮಾಣದ ದನದ ಚರ್ಮದ ಅಕ್ರಮ ದಾಸ್ತಾನು ಪತ್ತೆಯಾಗಿತ್ತು. ಅಲ್ಲದೇ ಈ ಪರಿಸರದಲ್ಲಿ ದೇವಸ್ಥಾನವಿದ್ದು, ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಈ ಹಿಂದೆ ಎಸ್ಪಿಗೂ ಮನವಿ ಮಾಡಿದ್ದರು.

ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ
ತೆಳ್ಳಾರಿನಲ್ಲಿ ಅಕ್ರಮವಾಗಿ ದನ ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಪರಾರಿಯಾಗಿರುವ ಉಳಿದ ಆರೋಪಿಗಳನ್ನು ಪೊಲೀಸರು ಶೀಘ್ರವೇ ಬಂಧಿಸಬೇಕು. ಇಂತಹ ಅಕ್ರಮ ಚಟುವಟಕೆಗಳನ್ನು ನಡೆಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಪರಿಸರದಲ್ಲಿ ಕೋಮು ಸಾಮರಸ್ಯ ಕದಡುವ ಪ್ರಯತ್ನ ನಡೆಯುತ್ತಿದ್ದು, ಇಂತಹ ಕೃತ್ಯದಲ್ಲಿ ಶಾಮೀಲಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಜರಂಗದಳ ಸಂಚಾಲಕ ಮಹೇಶ್ ಶೆಣೈ ಎಚ್ಚರಿಸಿದ್ದಾರೆ.