ಹೆತ್ತವರ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಕಳೆದ ನವೆಂಬರ್ ತಿಂಗಳ 28ರಂದು 58 ದಿನಗಳ ಹಸುಗೂಸುವೊಂದನ್ನು ಸಂಶಯಾಸ್ಪದವಾಗಿ ಮೂವರು ಯುವಕರು ಬಾಡಿಗೆ ಮನೆಯೊಂದರಲ್ಲಿ ಸಾಕಲೆತ್ನಿಸಿದ ಪ್ರಕರಣದಲ್ಲಿ ಮಗು ಅಪಹರಣ ಪ್ರಕರಣ ದಾಖಲಾಗಿದ್ದರೂ ಮಗುವಿನ ನೈಜ ಹೆತ್ತವರನ್ನು ಪತ್ತೆ ಹಚ್ಚುವಲ್ಲಿ ಹಾಗೂ ಜಾಲದ ಮೂಲ ಪತ್ತೆ ಹಚ್ಚುವಲ್ಲಿ ಪೆÇಲೀಸ್ ಇಲಾಖೆ ವಿಫಲವಾಗಿರುವ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೆತ್ತವರಿಲ್ಲದ 58 ದಿನಗಳ ಮುದ್ದಾದ ಗಂಡು ಮಗುವೊಂದನ್ನು ಮೂವರು ಯುವಕರು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ನೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಸಾಕಲೆತ್ನಿಸಿದಾಗ ದೊರೆತ ಮಾಹಿತಿಯಂತೆ ದಾಳಿ ನಡೆಸಿದ ಉಪ್ಪಿನಂಗಡಿ ಪೆÇಲೀಸರಿಗೆ ಆಸ್ಪತ್ರೆಯೊಂದರ ಜನನ ಮಾಹಿತಿಯ ಕಾರ್ಡ್ ಸಹಿತ ಗಂಡು ಮಗು ಪತ್ತೆಯಾಗಿತ್ತು.

ಮಗುವಿನ ತಾಯಿ ನೇಪಾಳಕ್ಕೆ ಹೋಗಿದ್ದ ಕಾರಣಕ್ಕೆ ಮಗುವನ್ನು ಆರೈಕೆ ಮಾಡಲು ಮಗುವಿನ ತಂದೆ ವಿನಂತಿಸಿದ ಹಿನ್ನೆಲೆಯಲ್ಲಿ ಮಗುವನ್ನು ತಂದಿರುವುದಾಗಿ ಶಂಕಿತ ಮೂವರು ತಿಳಿಸಿದ್ದು, ಗೊಂದಲಮಯ ಹೇಳಿಕೆ ಹಾಗೂ ಅಸಹಜ ಹೇಳಿಕೆ ಶಂಕಿತರಿಂದ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಪೆÇಲೀಸರು ಪ್ರಕರಣವನ್ನು ಕಿಡ್ನ್ಯಾಪ್ ಹಾಗೂ ಅಕ್ರಮ ಸಾಗಾಟ ಪ್ರಕರಣದಡಿ ದಾಖಲಿಸಿದ್ದರು ಹಾಗೂ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಹೆಚ್ ಬಿ ಆರ್ ಲೇಔಟಿನ ಹೆಣ್ಣೂರು ನಿವಾಸಿ ಮುಹಮ್ಮದ್ ಉಜೈಫ್ (27), ಹಿರೇಬಂಡಾಡಿಯ ಆನಡ್ಕದ ಪೆರಾಬೆಯ ಶಿಯಾಬುದ್ದೀನ್ ಅಹಮ್ಮದ್ (27) ಹಾಗೂ ಹಿರೇಬಂಡಾಡಿಯ ಅಡೆಕ್ಕಲ್ ಕೋಲಾಡಿ ನಿವಾಸಿ  ಮುಹಮ್ಮದ್ ಶಬೀರ್ (21) ಎಂಬವರನ್ನು ಬಂಧಿಸಿದ್ದರು.

ಬಂಧಿತರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನ ಮಹಮ್ಮದ್ ಉಧೈಫನನ್ನು ಮತ್ತೆ ಉಪ್ಪಿನಂಗಡಿ ಪೆÇಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗಾಗಿ ಹಾಗೂ ಮಗುವಿನ ನೈಜ ಹೆತ್ತವರನ್ನು ಪತ್ತೆ ಹಚ್ಚಲು ಬೆಂಗಳೂರಿಗೆ ಹೋಗಿ ಬಂದಿದ್ದರು. ಅಲ್ಲಿ ಮಗುವಿನ ನೈಜ ತಂದೆ ಎನ್ನಲಾದ ವ್ಯಕ್ತಿಯ ಬೀಗ ಜಡಿದ ಬಾಡಿಗೆ ಮನೆ ಪತ್ತೆಯಾಗಿದೆಯಾದರೂ ವ್ಯಕ್ತಿ ಪತ್ತೆಯಾಗಿರಲಿಲ್ಲ ಎನ್ನಲಾಗಿದೆ.