ಕಮ್ಯುನಲ್ ಗೂಂಡಾ ಪರ ಕೆಲಸ ಮಾಡುವ ಮಂಗಳೂರು ಪೊಲೀಸ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಂತರ್ಜಾತಿಯ ಜೋಡಿಯೊಂದನ್ನು ನೈತಿಕ ಪೊಲೀಸರು ಠಾಣೆಗೆ ಎಳೆದೊಯ್ದಾಗ, ಪೊಲೀಸರಿಂದ ನಾವು ಏನು ನಿರೀಕ್ಷಿಸಬಹುದೋ ಅದು ಹುಸಿಯಾಗಿದೆ. ಪ್ರೀತಿಸುವ ಜೋಡಿಗೆ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿರುವ ಪೊಲೀಸರು, ಅವರಿಗೆ ಕಿರುಕಳ ಕೊಟ್ಟವರ ಪರ ನಿಲ್ಲುತ್ತಾರೆ. ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂತಹ ಘಟನೆ ಪದೇಪದೇ ನಡೆಯುತ್ತಿದೆ.

ಅವಳಿ ಜಿಲ್ಲೆಯಲ್ಲಿ 2010 ಮತ್ತು 2017ರ ಅವಧಿಯಲ್ಲಿ 275 ನೈತಿಕ ಪೊಲೀಸ್‍ಗಿರಿ ಘಟನೆಗಳು ನಡೆದಿವೆ. ಇಂತಹ ಹೆಚ್ಚಿನ ಪ್ರಕರಣಗಳಲ್ಲಿ ನೈತಿಕ ಪೊಲೀಸರು ಪ್ರೀತಿಸುವ ಜೋಡಿಗೆ ಹೊಡೆದ ಬಳಿಕವೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪಿಲಿಕುಳದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲೂ ನೈತಿಕ ಪೊಲೀಸರು, ಪೊಲೀಸರ ಉಪಸ್ಥಿತಿಯಲ್ಲೂ ಯುವತಿಗೆ ಹೊಡೆಯುವ ಮೂಲಕ ದರ್ಪ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಪಾಲಕರನ್ನು ಠಾಣೆಗೆ ಕರೆಸಿ ಗದರಿಸುವುದು ಅಥವಾ ತಪ್ಪು ಎತ್ತಿ ತೋರಿಸುವುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಸುರತ್ಕಲ್ಲಿನಲ್ಲಿ ಇಂತಹದ್ದೇ ಘಟನೆಯೊಂದು ಗುರುವಾರ ನಡೆದಿದೆ.

ಪೊಲೀಸರು ಪಾಲಕರಿಗೆ ಎಚ್ಚರಿಕೆ ನೀಡಿ ಮಹಿಳೆಯೊಬ್ಬಳನ್ನು ಬಿಟ್ಟಿದ್ದಾರೆ. ಯುವಕನ ಪಾಲಕರಿಗೆ ಫೋನಾಯಿಸಿ ಶಿಸ್ತಿನ ಪಾಠ ಕಲಿಸಿದ್ದಾರೆ.

ಕಳೆದ ತಿಂಗಳು ಸುಬ್ರಹ್ಮಣ್ಯದಲ್ಲಿ ತಮಿಳು ನಟಿ ಹಾಗೂ ಆಕೆಯ ಸಹವರ್ತಿಯೊಬ್ಬನಿಗೆ ಇದೇ ನೈತಿಕ ಪೊಲೀಸರು ಕಿರುಕುಳ ನೀಡಿದ್ದು, ಈ ದೃಶ್ಯ ವೈರಲಾದ ಬಳಿಕ ಎಸ್ಪಿ ಸುಧೀರ್ ಕುಮಾಆರ್ ರೆಡ್ಡಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಂಡಿದ್ದರು.

“ಇಂತಹ ಘಟನೆಗಳು ನನ್ನ ಗಮನಕ್ಕೆ ಬಂದೇ ಇಲ್ಲ” ಎಂದು ಮಂಗಳೂರು ಪೊಲೀಸ್ ಆಯುಕ್ತ ಸುರೇಶ್ ಹೇಳುತ್ತಾರೆ.

“ಪಾಲಕರಿಗೆ ಕೌನ್ಸೆಲಿಂಗ್ ಮಾಡುವುದು ಪೊಲೀಸರ ಕೆಲಸವಲ್ಲ. ಇಲ್ಲಿನ ಪೊಲೀಸ್ ವ್ಯವಸ್ಥೆ ಕೋಮುವಾದಕ್ಕೆ ಸಹಾಯಕಾರಿಯಾಗಿ ಕಾರ್ಯಾಚರಿಸುತ್ತಿದೆ” ಎಂದು ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಸುರೇಶ್ ಭಟ್ ಹೇಳುತ್ತಾರೆ.

 

LEAVE A REPLY