ಮಹಿಳೆಗೆ ಹಲ್ಲೆಗೈದವ ಸೆರೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೈಹಿಡಿದು ಮಾನಭಂಗಕ್ಕೆ ಯತ್ನಿಸಿದ್ದ ಪ್ರಕರಣದ ಆರೋಪಿ ಸಹೋದರರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ಕಸಬಾ ಗ್ರಾಮದ ಕುಂಡಡ್ಕ ಕೂಟೇಲು ಎಂಬಲ್ಲಿನ ಅನಿತಾ ವೇಗಸ್ ತನ್ನ ಮನೆ ಸಮೀಪದ ಹುಣಸೆ ಮರದಿಂದ ಹಣ್ಣು ಹೆಕ್ಕುತ್ತಿದ್ದ ಸಂದರ್ಭ ನೆರೆಯ ನಿವಾಸಿ ಸಹೋದರರಿಬ್ಬರು ಹಲ್ಲೆ ನಡೆಸಿ ಅಮಾನವೀಯ ಕೃತ್ಯ ಎಸಗಿದ್ದರೆನ್ನಲಾಗಿದೆ. ಅನಿತಾರ ಮೇಲೆ ಹಲ್ಲೆ ನಡೆಸಿ ರಾಕ್ಷಸೀ ಕೃತ್ಯವೆಸಗಿದ ಬಗ್ಗೆ ನೆರೆಯ ನಿವಾಸಿ ಆಂಡ್ರು ವೇಗಸ್ ಪುತ್ರರಾದ ಲಾರೆನ್ಸ್ ವೇಗಸ್ ಮತ್ತು ಸಹೋದರ ಡೇವಿಡ್ ವೇಗಸ್ ವಿರುದ್ಧ ಗಾಯಾಳು ಮಹಿಳೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು.

28vittla1 28vittla2

ದೂರು ದಾಖಲಾಗುತ್ತಿದ್ದಂತೆ ಪ್ರಕರಣದ ಪ್ರಮುಖ ಆರೋಪಿ ಲಾರೆನ್ಸ್ ಎಂಬಾತ ವಿಟ್ಲದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗುವ ಮೂಲಕ ಪೊಲೀಸರ ಬಂಧನದಿಂದ ಬಚಾವಾಗುವುದಕ್ಕಾಗಿ ಸ್ಕೆಚ್ ರೂಪಿಸಿದ್ದ. ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಸಿಪಿಐ ಮಂಜಯ್ಯ ನೇತೃತ್ವದ ವಿಟ್ಲ ಪೊಲಿಸರ ತಂಡ ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿತ್ತು. ಆದರೆ ಪೊಲೀಸರ ತಂತ್ರಗಾರಿಕೆ ಬಗ್ಗೆ ಮೊದಲೇ ಅರಿತಿದ್ದ ಲಾರೆನ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಂಡು ಪರಾರಿಯಾಗುತ್ತಿದ್ದಂತೆ ವಿಟ್ಲದ ದೇವಸ್ಥಾನ ರಸ್ತೆಯಲ್ಲಿ ಅಟ್ಟಾಡಿಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಲಾರೆನ್ಸ್ ಸಹೋದರ ಡೇವಿಡನನ್ನು ಬಂಧಿಸಲು ಪೊಲೀಸರು ಮತ್ತೆ ಬಲೆಬೀಸಿದ್ದಾರೆ.