ಟ್ಯಾಂಕರ್ ಗುದ್ದಿ ಪೇದೆ ಸಾವು

ಮೃತ ಪೊಲೀಸ್ ರುಕ್ಮಯ್ಯ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಟ್ಯಾಂಕರ್ ಡಿಕ್ಕಿ ಹೊಡೆದು ಪಾದಚಾರಿ ಪೊಲೀಸ್ ಹೆಡ್ ಕಾನಸ್ಟೇಬಲ್ ಒಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನಿನಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತ ಪೊಲೀಸ್ ಸಿಬ್ಬಂದಿಯನ್ನು ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ-ದೋಟ ನಿವಾಸಿ, ಪುತ್ತೂರು ನಗರ ಠಾಣಾ ಹೆಡ್ ಕಾನಸ್ಟೇಬಲ್ ರುಕ್ಮಯ್ಯ ಭಂಡಾರಿ (48) ಎಂದು ಹೆಸರಿಸಲಾಗಿದೆ. ಅನಿವಾರ್ಯ ಕೆಲಸದ ನಿಮಿತ್ತ ಬುಧವಾರ ಮಧ್ಯಾಹ್ನ ಮೆಲ್ಕಾರಿಗೆ ಬಂದಿದ್ದ ರುಕ್ಮಯ್ಯ ಇಲ್ಲಿನ ಹೆದ್ದಾರಿ ಬದಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಧಾವಿಸಿ ಬಂದ ಪೆಟ್ರೋಲ್ ಸಾಗಾಟದ ಟ್ಯಾಂಕರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಬಂಟ್ವಾಳ ನಗರ, ವಿಟ್ಲ, ಉಳ್ಳಾಲ, ಉಪ್ಪಿನಂಗಡಿ ಸಹಿತ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದ ರುಕ್ಮಯ್ಯ ಅವರು ಸರಳ ಸ್ವಭಾವಿಯಾಗಿ ಜನಸ್ನೇಹಿಯಾಗಿದ್ದರು. ಮೃತರು ಪತ್ನಿ ವೀಣಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಬಂಟ್ವಾಳ ಟ್ರಾಫಿಕ್ ಎಸೈ ಕ್ರಮದಿಂದ ಮೆಲ್ಕಾರ್ ಜಂಕ್ಷನಿನಲ್ಲಿ ಹೆದ್ದಾರಿ ಅಗಲೀಕರಣಗೊಂಡಿದ್ದರೂ ಇನ್ನೂ ಇಲ್ಲಿನ ಅವ್ಯವಸ್ಥೆ ಯಥಾಸ್ಥಿತಿ ಮುಂದುವರಿದಿದೆ. ಮೆಲ್ಕಾರ್ ಪೇಟೆಯಲ್ಲಿ ಹೆದ್ದಾರಿಯ ಎರಡೂ ಕಡೆಗಳಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಅಗಲೀಕರಣಗೊಳಿಸಿ ಡಾಮರೀಕರಣಗೊಳಿಸಿದ್ದರೂ ಅಗಲೀಕರಣಗೊಳಿಸಿದ ಎರಡೂ ಬದಿಗಳೂ ಅನಧಿಕೃತ ಪಾರ್ಕಿಂಗ್ ಜಾಗಗಳಾಗಿ ಕಂಡು ಬರುತ್ತಿದೆ. ಅಲ್ಲದೆ ಇಲ್ಲಿನ ಮುಖ್ಯ ವೃತ್ತ ಇನ್ನೂ ತೆರವುಗೊಳ್ಳದೆ ಇದ್ದು, ಇದು ಇಲ್ಲಿನ ಹೆದ್ದಾರಿ ಯಾವುದು ಎಂಬುದೇ ವಾಹನ ಸವಾರರಿಗೆ ತಿಳಿಯದಾಗಿರುತ್ತದೆ. ಇಲ್ಲಿನ ಹಳೆಯ ಸರ್ಕಲ್ ತೆರವುಗೊಳ್ಳದೆ ಮೆಲ್ಕಾರ್ ಹೆದ್ದಾರಿಯ ಸ್ಥಿತಿ ಗತಿ ಅರಿತುಕೊಳ್ಳಲು ಕಷ್ಟವಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸುತ್ತಾರೆ.