ತಡರಾತ್ರಿ ಮನೆಗೆ ನುಗ್ಗಿ ವೃದ್ಧ ದಂಪತಿಗೆ ಪೋಲಿಸ್ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಅರ್ಧ ರಾತ್ರಿಯಲ್ಲಿ ಮನೆಯೊಂದಕ್ಕೆ ನುಗ್ಗಿದ ಪೋಲಿಸರು ವೃದ್ಧ ದಂಪತಿಗೆ ಹಲ್ಲೆಗೈದು ಗಂಭೀರ ಗಾಯಗೊಳಿಸಿ ಗೂಂಡಾಗಿರಿ ಪ್ರದರ್ಶಿಸಿದ ಘಟನೆ ಪೂವ್ವಲ್ ಎಂಬಲ್ಲಿ ನಡೆದಿದೆ.

ಒಬ್ಬ ಪೋಲಿಸ್ ಅಧಿಕಾರಿಯೊಂದಿಗೆ ಆರು ಮಂದಿ ಪೇದೆಗಳು ಏಕಾಏಕಿ ಮನೆಗೆ ನುಗ್ಗಿ ಹಲ್ಲೆಗೈದಿರುವುದಾಗಿ ದಂಪತಿ ದೂರಿದ್ದಾರೆ. ಪೂವ್ವಲ್ ನಿವಾಸಿ ಅಬೂಬಕ್ಕರ್ ಪತ್ನಿ ಆಯಿಷಾ ಎಂಬವರು ಪೋಲಿಸರ ಹಲ್ಲೆ ಹಾಗೂ ಥಳಿತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ದಂಪತಿಯ ಪುತ್ರ ಝುಬೈರ್ ಹೊಡೆದಾಟ ಪ್ರಕರಣದ ಆರೋಪಿಯಾಗಿದ್ದು, ಈತ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈತನನ್ನು ಹುಡುಕಿ ಮನೆಗೆ ಆಗಮಿಸಿದ ಪೋಲಿಸರು ಮೊದಲು ಬಾಗಿಲನ್ನು ತಟ್ಟಿದ್ದಾರೆ. ಆದರೆ ವೃದ್ಧ ದಂಪತಿಯಾದ ಕಾರಣ ಬಾಗಿಲು ತೆರೆಯಲು ವಿಳಂಬವಾದ ಹಿನ್ನೆಲೆಯಲ್ಲಿ ಹಿಂಬದಿಯ ಬಾಗಿಲನ್ನು ಮುರಿದು ಪೊಲೀಸರು ಒಳನುಗ್ಗಿರುವುದಾಗಿ ದೂರಲಾಗಿದೆ.

ಒಳನುಗ್ಗಿದ ಪೋಲಿಸರು ಪುತ್ರನನ್ನು ಎಲ್ಲಿ ಅಡಗಿಸಿರುವುದಾಗಿ ಕೇಳಿ ಆಯಿಷಾರನ್ನು ದೂಡಿ ಹಾಕಿ ಬೂಟಿನಿಂದ ಥಳಿಸಿರುವುದಾಗಿ ದೂರಲಾಗಿದೆ. ಇದನ್ನು ತಡೆಯಲು ಹೋದ ಪತಿ ಅಬೂಬ್ಬಕ್ಕರ್ ಕೆಳಗೆ ಜಾರಿ ಬಿದ್ದು ಕುತ್ತಿಗೆಗೆ ಗಾಯವಾಗಿದೆ. ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ, ಜಿಲ್ಲಾ ಪೋಲಿಸ್ ಅಧಿಕಾರಿ, ವನಿತಾ ಕಮೀಷನ್ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡುವುದಾಗಿ ವೃದ್ಧ ದಂಪತಿ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ವೃದ್ಧ ದಂಪತಿಯಿಂದ ಹೇಳಿಕೆ ಪಡೆಯಲು ಪೋಲಿಸರು ಈ ತನಕ ಬಂದಿಲ್ಲವೆಂಬುದಾಗಿ ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿ ಮೇನಕಾ ಗಾಂಧಿ ಹಾಗೂ ಕೇಂದ್ರ ಗೃಹ ಸಚಿವಗೂ ದೂರು ನೀಡುವುದಾಗಿ ಆವರು ಸುದ್ದಿಗಾರರಿಗೆ ತಿಳಿಸಿದರು.