ನಶೆಯಲ್ಲಿದ್ದ ಯುವಕನ ಮೇಲೆ ಅನೈಸರ್ಗಿಕ ಸೆಕ್ಸ್ ನಡೆಸಿದ ಮನೆಯ ಅಡುಗೆಯಾಳು ಸೆರೆ

ಬೆಂಗಳೂರು : ಮದ್ಯದ ನಶೆಯಲ್ಲಿದ್ದ ಒಡಿಶಾ ಮೂಲದ ಯುವಕನೊಬ್ಬನೊಂದಿಗೆ ಅನೈಸರ್ಗಿಕ ಸೆಕ್ಸ್ ನಡೆಸಿದ ಆರೋಪದ ಮೇಲೆ ಅದೇ ರಾಜ್ಯದ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಯುವಕ ಕೊರಮಂಗಲ ಮೊದಲನೇ ಬ್ಲಾಕ್ ನಿವಾಸಿಯಾಗಿದ್ದು ರೂಮ್ ರೆಂಟಲ್ ಏಜನ್ಸಿಯೊಂದರ ರೀಜನಲ್ ಮ್ಯಾನೇಜರ್ ಆಗಿದ್ದರೆ, ಆರೋಪಿ  ಸಂಜಯ್ ಭೌಮಿಕ್ (23)  ವೈಟ್ ಫೀಲ್ಡ್ ಪ್ರದೇಶದಲ್ಲಿನ ಮನೆಯೊಂದರಲ್ಲಿ ಅಡುಗೆಯಾಳಾಗಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 5ರ ರಾತ್ರಿ ಸಂತ್ರಸ್ತ ಪಬ್ ಒಂದರಲ್ಲಿ ಕಂಠಪೂರ್ತಿ ಕುಡಿದು  ಕ್ಯಾಬ್ ಹತ್ತಿ ಮನೆ ಸಮೀಪ ಇಳಿದಿದ್ದ. ಅಲ್ಲಿಂದ ನಡೆಯುತ್ತಿದ್ದಂತೆಯೇ ರಸ್ತೆ ಬದಿಯಲ್ಲೇ ಆತ ವಾಂತಿ ಮಾಡಲು ಆರಂಭಿಸಿದ್ದು ಆತನಿಗೆ ಸಹಾಯ ಮಾಡುವ ನೆಪದಲ್ಲಿ ಬಂದ ಭೌಮಿಕ್ ಆತನನ್ನು ಕೆ ಟಿ ಬೆಡ್ ಮತ್ತು ಕೊರಮಂಗಲ ಮೊದಲನೇ ಬ್ಲಾಕ್ ಮಧ್ಯೆಯಿರುವ ಮಂದ ಬೆಳಕಿರುವ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಂತೆಯೇ ಸಂತ್ರಸ್ತ ಬಟ್ಟೆಯಲ್ಲೇ ಉಚ್ಚೆ ಹೊಯ್ದಿದ್ದನೆನ್ನಲಾಗಿದೆ. ಆರಂಭದಲ್ಲಿ ತನಗೇನಾಗುತ್ತದೆ ಎಂಬ ಪರಿಜ್ಞಾನವೇ ಇಲ್ಲದ ಸಂತ್ರಸ್ತನಿಗೆ ತನ್ನ ಮೇಲೆ ಲೈಂಗಿಕ ದಾಳಿ ನಡೆದಿದೆಯೆನ್ನುವುದು ನಂತರವಷ್ಟೇ ತಿಳಿದಿತ್ತು. ಆತ ಕೊರಮಂಗಲ ಪೊಲೀಸರಿಗೆ ದೂರು ನೀಡಿದ್ದು ಆತ ನೀಡಿದ ಮಾಹಿತಿಯಂತೆ ಸಂಜಯನನ್ನು  ಆತನ ಸಂಬಂಧಿಯೊಬ್ಬರ ಮನೆಯಿಂದ ಬಂಧಿಸಲಾಗಿದೆ. ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.