ರಾಜ್ಯದಲ್ಲಿ ಮದ್ಯ ದುರಂತ ಮುನ್ನೆಚ್ಚರಿಕೆ ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ಆರಂಭ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ರಾಜ್ಯದಲ್ಲಿ ಭಾರೀ ಮದ್ಯ ದುರಂತಕ್ಕೆ ಸಾಧ್ಯತೆ ಇದೆ ಎಂದು ಪೊಲೀಸ್ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಬಕಾರಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಯಾ ಜಿಲ್ಲೆಗಳ ಉನ್ನತ ಅಬಕಾರಿ ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿ ಸಂಭಾವ್ಯ ಮದ್ಯ ದುರಂತ ತಪ್ಪಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗಿದೆ.
ಸಂಭಾವ್ಯ ಮದ್ಯ ದುರಂತ ತಪ್ಪಿಸಲು ಮತ್ತು ಅಕ್ರಮ ಮದ್ಯ ಸಾಗಾಟ ಮಾರಾಟವನ್ನು ಸಮರ್ಪಕವಾಗಿ ತಡೆಗಟ್ಟಲು ಎಲ್ಲಾ ಜಿಲ್ಲೆಗಳಲ್ಲಿ ಅಬಕಾರಿ ಕಂಟ್ರೋಲ್ ರೂಂ ಈಗಾಗಲೇ ತೆರೆಯಲಾಗಿದೆ. ರಜೆಯಲ್ಲಿರುವ ಎಲ್ಲಾ ಅಬಕಾರಿ ಸಿಬ್ಬಂದಿಗಳ ರಜೆಗಳನ್ನು ರದ್ದುಪಡಿಸಿ ಅವರನ್ನು ತುರ್ತಾಗಿ ಸೇವೆಗೆ ಹಾಜರಾಗಿಸುವಂತೆಯೂ ತುರ್ತು ನಿರ್ದೇಶವನ್ನೂ ಅಬಕಾರಿ ಇಲಾಖೆ ನೀಡಿದೆ. ವಿಶೇಷ ಅಬಕಾರಿ ತಪಾಸಣಾ ತಂಡಗಳಿಗೂ ರೂಪು ನೀಡಲಾಗಿದ್ದು ಆ ತಂಡ ಆಹೋರಾತ್ರಿ ಎಲ್ಲೆಡೆಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ನಕಲಿ ಮದ್ಯ ದುರಂತ ಸಂಭವಿಸಬಹುದೆಂದು ಶಂಕಿಸಲಾಗುತ್ತಿರುವ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚಿನ ನಿಗಾ ಇರಿಸಿ ಅಂತಹ ಪ್ರದೇಶಗಳಲ್ಲಿ ಎಲ್ಲಾ ವಾಹನಗಳನ್ನೂ ಬಿಗಿ ತಪಾಸಣೆಗೊಳಪಡಿಸಲಾಗುತ್ತಿದೆ. ಶೇಂದಿ ಅಂಗಡಿಗಳು ಮತ್ತು ಬಿಯರ್ ವೈನ್ ಪಾರ್ಲರುಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಈ ತಿಂಗಳು ವಿಷು ಮತ್ತು ಈಸ್ಟರ್ ಹಬ್ಬಗಳು ಒಟ್ಟಿಗೆ ಬರಲಿರುವ ಹಿನ್ನೆಲೆಯಲ್ಲಿ ಆತನಕ ತಪಾಸಣಾ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ. ಹಬ್ಬಗಳ ಋತುಗಳಾಗಿರುವ ಹಿನ್ನೆಲೆಯಲ್ಲಿ ಈ ತಿಂಗಳು ಹೆಚ್ಚು ಜಾಗ್ರತೆ ಪಾಲಿಸುವಂತೆ ಯೂ ಸರಕಾರ ಅಬಕಾರಿ ಇಲಾಖೆಗೆ ನಿರ್ದೇಶ ನೀಡಿದೆ.
ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯೊಳಗಿನ 1800ರಷ್ಟು ಮದ್ಯದಂಗಡಿಗಳನ್ನು ಮುಚ್ಚಬೇಕಾಗಿ ಬಂದಿರುವ ಹಿನ್ನೆಲೆಯಲ್ಲಿ ಅಂತಹ ಪ್ರದೇಶಗಳ ಮದ್ಯಪ್ರಿಯರಿಗೆ ಮದ್ಯಕ್ಕಾಗಿ ಅತ್ತಿತ್ತ ಅಲೆದಾಡಬೇಕಾಗಿ ಬಂದಿದೆ. ಮುಚ್ಚದೆ ಉಳಿದಿರುವ ಮದ್ಯದಂಗಡಿಗಳಲ್ಲಿ ಮದ್ಯ ಖರೀದಿದಾರರ ಭಾರೀ ದೊಡ್ಡ ಸಾಲುಗಳು ಕಂಡುಬಂದಿದೆ.