ಹೊಯ್ಗೆ ದರ ಹೆಚ್ಚಳ ವಿರೋಧಿಸಿ ಗುತ್ತಿಗೆದಾರರಿಂದ ಲಾರಿ ತಡೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಕುಮಟಾದಿಂದ ಶಿರಸಿಗೆ ಬರುವ ಮರಳು ಲಾರಿಗಳ ದರಗಳಲ್ಲಿ ವ್ಯಾಪಕ ಏರಿಕೆ ವಿರೋಧಿಸಿ ನಿಲೇಕಣಿ ಬಳಿ ಶಿರಸಿ ಸಿವಿಲ್ ಗುತ್ತಿಗೆದಾರರು ಬುಧವಾರ ರಾತ್ರಿ ರೇತಿ ಲಾರಿ ತಡೆದು ಅಸಮಾಧಾನ ವ್ಯಕ್ತಪಡಿಸಿದರು.

ಶಿರಸಿ ಸಿವಿಲ್ ಗುತ್ತಿಗೆದಾರರ ಪ್ರಮುಖರಾದ ಪುತ್ತು ಮೇಸ್ತ, ಗಣೇಶ ದಾವಣಗೇರಿ, ರಮೇಶ ನಾಯ್ಕ, ಸಂತೋಷ ನಾಯ್ಕ, ಸುರೇಶ ನಾಯ್ಕ, ಈರಪ್ಪ ನಾಯ್ಕ, ಕಂಡಪ್ಪ ಗೌಳಿ, ಶ್ರೀಧರ ಹೆಗಡೆ, ತಬ್ರೇಜ್ ಇತರರು ಲಾರಿ ನಿಲ್ಲಿಸಿ ಅಸಮಾಧಾನ ವ್ಯಕ್ತಪಡಿಸಿದರು. ಹೋದ ವರ್ಷ ಮರಳು ದರ ತೆಗೆಯುವ ಸ್ಥಳದಲ್ಲಿ 3 ಬರಾಸಿಗೆ 7-8 ಸಾವಿರ ರೂ ದರ ಇದ್ದು, ಶಿರಸಿಗೆ ಬರುವ ದರ 5,000 ರೂ ಬಾಡಿಗೆ ಸೇರಿ 12-13 ಸಾವಿರ ರೂಪಾಯಿಗೆ ರೇತಿ ಸಿಗುತ್ತಿತ್ತು. ಈ ವರ್ಷ ಸ್ಥಳದಲ್ಲೇ 12,000 ರೂ ಹೇಳಿ ಸಂಚಾರ ದರ 8,000 ರೂ ಹಾಕಲಾಗುತ್ತದೆ. ಆದರೆ ಶಿರಸಿ ಗಡಿಗೆ ಬಂದಾಗ 22,000 ರೂ ಆಗುತ್ತದೆ. ಈ ಮಧ್ಯ ಕೆಲವು ಏಜೆಂಟರು ಸೇರಿಕೊಂಡು ರೇತಿ ದರ ಶಿರಸಿಯಲ್ಲಿ 30,000 ರೂ ಮಾಡಿದ್ದಾರೆ. ಸರ್ಕಾರಿ ಕಾಮಗಾರಿ ಪಡೆದ ಗುತ್ತಿಗೆದಾರರು 15,000 ರೂ ದರದಲ್ಲಿ ಗುತ್ತಿಗೆ ಪಡೆದು 30,000 ರೂ ರೇತಿ ಪಡೆದು ಕೆಲಸ ಮಾಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಈ ರೇತಿ ಅನುಮತಿ ಬಳಿಕ ನಡೆಯುವ ಅಕ್ರಮ ತಡೆಯಬೇಕು. ನ್ಯಾಯಯುತ ದರದಲ್ಲಿ ರೇತಿ ಸಿಗಬೇಕು ಎಂದು ಆಗ್ರಹಿಸಿದರು.