ಗೇರು ನಿಗಮದ ಎಡಬಿಡಂಗಿ ನೀತಿಯಿಂದ ಗುತ್ತಿಗೆದಾರರಿಗೆ ಸಂಕಟ

ಗೇರು ಪ್ಲಾಂಟೇಶನ್ನಿಗೆ ಬೆಂಕಿ ಹಾಕಿರುವುದು

ಕೋರ್ಟ್ ಮೊರೆ ಹೋಗಲು ಚಿಂತನೆ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಎಡಬಿಡಂಗಿ ನೀತಿಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೇರು ನೆಡುತೋಪು ಗುತ್ತಿಗೆ ಪಡೆದವರು ಕೈ ಸುಟ್ಟುಕೊಳ್ಳುತ್ತಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಏರಲು ಚಿಂತನೆ ನಡೆಸಿದ್ದಾರೆ.

ಇ-ಟೆಂಡರಿನಲ್ಲಿ ಲಕ್ಷಾಂತರ ರೂಪಾಯಿಯಲ್ಲಿ ಗುತ್ತಿಗೆ ಪಡೆದ ಈ ಗುತ್ತಿಗೆದಾರರು ಗೇರು ಅಭಿವೃದ್ಧಿ ನಿಗಮ ನೆಡುತೋಪಿನ ಗಡಿ ಗುರುತಿಸಿಕೊಡದ ಕಾರಣಕ್ಕಾಗಿ ಗೇರು ಫಸಲು ತೆಗೆಯುವಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಟೆಂಡರಿಗೆ ವ್ಯಯಿಸಿದ ಹಣವೂ ಬಾರದೇ ಕೈ ಸುಟ್ಟುಕೊಳ್ಳುತ್ತಿದ್ದಾರೆ.

ಲಕ್ಷಾಂತರ ರೂ ಟೆಂಡರ್

ಪ್ರತಿವರ್ಷ ಗೇರು ಅಭಿವೃದ್ಧಿ ನಿಗಮ ತನ್ನ ಗೇರು ನೇಡುತೋಪುಗಳನ್ನು ಇ-ಟೆಂಡರ್ ಮೂಲಕ ಗೇರು ಬೀಜ ಆರಿಸಲು ಗುತ್ತಿಗೆ ನೀಡುತ್ತದೆ. ಗುತ್ತಿಗೆ ಪಡೆದವರು 15 ದಿನಗಳ ಒಳಗೆ ಸಂಪೂರ್ಣ ಟೆಂಡರ್ ಮೊತ್ತ ಭರಣ ಮಾಡಬೇಕು. ಈ ಪದ್ಧತಿಯಂತೆ ಟೆಂಡರ್ ಪಡೆದವರಿಗೆ ನೆಡುತೋಪಿನ ಗಡಿ ಗುರುತಿಸಿಕೊಡುವ ಹೊಣೆ ಇಲಾಖೆಯದ್ದು. ಈ ಗಡಿ ಒಳಗೆ ಇರುವ ಗೇರು ಮರಗಳ ಫಸಲ ಸಂರಕ್ಷಿಸಿ, ಕಾಯ್ದು, ಬೀಜ ಆರಿಸಿ ಗುತ್ತಿಗೆದಾರರು ಲಾಭ ಮಾಡಬೇಕು. ಆದರೆ ನಿಗಮ ಟೆಂಡರ್ ಮಾಡುತ್ತಿದೆಯಾದರೂ ಗಡಿ ಗುರುತಿಸಿಕೊಡುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಇದರ ಜೊತೆಗೆ ಟೆಂಡರಿನಲ್ಲಿ ನೆಡುತೋಪಿನಲ್ಲಿ ಇರುವ ಗೇರುಮರಗಳನ್ನು ಉಲ್ಲೇಖಿಸಲಾಗುತ್ತದೆಯದರೂ, ವಾಸ್ತವಿಕವಾಗಿ ಅದರ ಅರ್ಧದಷ್ಟು ಮರಗಳು ಇರುವುದಿಲ್ಲ.

ಇವರದ್ದು ಗೋಳು

2016-17ನೇ ಸಾಲಿಗಾಗಿ ಉಮೇಶ ಸಣಕೂಸ ಗೌಡ ಅವರು ಬೆಳಂಬಾರ, ಕೊಗ್ರೆ, ಹಡವ ಗ್ರಾಮಗಳುಳ್ಳ 43 ಹೆಕ್ಟೆರ್ ಪ್ರದೇಶ ಘಟಕ ನಂ 82ನ್ನು 96,684 ರೂಪಾಯಿಗೆ ಟೆಂಡರ್ ಮಾಡಿದ್ದು, ತೆರಿಗೆ ಮತ್ತಿತರ ಶುಲ್ಕ ಸೇರಿ ನಿಗಮಕ್ಕೆ 1,09,737 ರೂ ಭರಣ ಮಾಡಿದ್ದಾರೆ. ಈ ನೆಡುತೋಪಿನಲ್ಲಿ 14,000 ಗೇರು ಗಿಡಗಳು ಇವೆ ಎಂದು ಉಲ್ಲೇಖಿಸಿದ್ದರೂ, ವಾಸ್ತವಿಕವಾಗಿ 4,000 ಗಿಡಗಳು ಇಲ್ಲ.

ಬಲೀಂದ್ರ ತಿಮ್ಮಪ್ಪ ಗೌಡ ಅವರು ಅಘನಾಶಿನಿ, ಕಾಗಾಲಿನ 50 ಹೆಕ್ಟೆರ್ ಪ್ರದೇಶದ ಘಟಕ ನಂ 16ನ್ನು 3,15,413 ರೂಪಾಯಿಗೆ ಟೆಂಡರ್ ಪಡೆದಿದ್ದು, 3,55,763 ರೂ ಭರಣ ಮಾಡಿದ್ದಾರೆ. ಇಲ್ಲಿ 5,952 ಗಿಡಗಳಿವೆ ಎಂದು ನಮೂದಿಸಲಾಗಿದೆ. ಬಲೀಂದ್ರ ಗೌಡ ಬೆಳಸೆ, ಶೆಡಗೇರಿ ಭಾಗದ 74.07 ಹೆಕ್ಟೆರ್ ಪ್ರದೇಶದ ಪ್ಲಾಟ್ ನಂ 71ನ್ನು 2,31,000 ರೂಪಾಯಿಗೆ ಗುತ್ತಿಗೆ ಪಡೆದು 2,62,185 ರೂ ಭರಣ ಮಾಡಿದ್ದಾರೆ. ಇಲ್ಲಿ 8,146 ಮರಗಳು ಇವೆ ಎಂದು ನಮೂದಾಗಿದೆ. ಇಲ್ಲಿ ಕೆಲವು ದಿನಗಳ ಹಿಂದೆ ಯಾರೋ ದುರುಳರು ಬೆಂಕಿ ಇಟ್ಟು 5 ಹೆಕ್ಟೆರಿನಷ್ಟು ಗೇರು ಪ್ರದೇಶವನ್ನು ಸುಟ್ಟು ಹಾಕಿದ್ದಾರೆ.

ಗೋಕರ್ಣದ ಹಮ್ಮು ಗೌಡ 120 ಹೆಕ್ಟೆರ್ ಪ್ರದೇಶವುಳ್ಳ ಗೋಕರ್ಣದ ಘಟಕ ನಂ 72ನ್ನು 1,67,754 ರೂಪಾಯಿಗೆ ಟೆಂಡರ್ ಮಾಡಿದ್ದು, 1,90,054 ರೂ ಭರಣ ಮಾಡಿದ್ದಾರೆ. ಇದೇ ಪ್ರದೇಶದ 9.20 ಎಕರೆ ಪ್ರದೇಶವನ್ನು ಖಾಸಗಿ ವ್ಯಕ್ತಿಯೊಬ್ಬರು ಬೆಟ್ಟ ಬಾಗಾಯತಿ ಹೆಸರಲ್ಲಿ ವಶದಲ್ಲಿಟ್ಟುಕೊಂಡಿದ್ದು, ಇಲ್ಲಿ ಗೇರು ಫಸಲು ತೆಗೆಯಲು ಬಿಡುತ್ತಿಲ್ಲವಂತೆ.

ಇವರ ಸಮಸ್ಯೆಯೇನು ?

ಗೇರು ನಿಗಮಕ್ಕೆ ಟೆಂಡರ್ ಹಣವನ್ನು ಭರಣ ಮಾಡಿರುವ ಇವರೆಲ್ಲರ ಪ್ರಮುಖ ಸಮಸ್ಯೆ ಎಂದರೆ ಟೆಂಡರಿನಲ್ಲಿ ನಮೂದಾಗಿರುವಂತಹ ನೆಡುತೋಪು ಪ್ರದೇಶದ ಗಡಿ ಗುರುತಿಸಿಕೊಡುವುದು. ತಾವು ಪಡೆದ ಟೆಂಡರಿನ ಪ್ರದೇಶ ಯಾವುದು ? ಯಾವೆಲ್ಲ ಮರಗಳ ಗೇರು ಫಸಲು ತೆಗೆಯಬೇಕು ಎನ್ನುವುದು ಇವರೆಲ್ಲರಿಗೂ ಗೊಂದಲ. ಗೇರು ನಿಗಮದ ಜೊತೆಗೆ ಇದೇ ಪ್ರದೇಶದಲ್ಲಿ ಅರಣ್ಯ ಇಲಾಖೆಯೂ ಪ್ರತ್ಯೇಕ ಟೆಂಡರ್ ನೀಡುತ್ತದೆ. ಹೀಗಾಗಿ ತಮ್ಮ ಪ್ರದೇಶ ಯಾವುದು ಎಂದು ಗುರುತಿಸಿ ಕೊಡಿ ಎಂದು ಗುತ್ತಿಗೆದಾರರು ಹಲವು ಬಾರಿ ನಿಗಮಕ್ಕೆ ಮನವಿ ಮಾಡಿದ್ದಾರೆ. ಸ್ವತಃ ಭೇಟಿಯಾಗಿ ಒತ್ತಾಯ ಮಾಡಿದ್ದಾರೆ. ಆದರೆ ನಿಗಮದವರ ಸ್ಪಂದನ ಶೂನ್ಯ. ಟೆಂಡರ್ ನೀಡಿ ಹಣ ಬಂದಾದ ಮೇಲೆ ಗುತ್ತಿಗೆದಾರರ ಹಂಗೇಕೆ ಎನ್ನುವುದು ಅದರ ನಿಲುವಾದಂತಿದೆ. ನಿಗಮದ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಗುತ್ತಿಗೆದಾರರು ಈಗ ನ್ಯಾಯಾಲಯದ ಮೆಟ್ಟಿಲು ಏರಲು ಹೊರಟಿದ್ದಾರೆ. ಗೇರು ನಿಗಮ ಇನ್ನಾದರೂ ಈ ಸಮಸ್ಯೆ ಬಗೆಹರಿಸೀತೇ ಎನ್ನುವುದನ್ನು ಕಾದು ನೋಡಬೇಕಿದೆ.