ರಸ್ತೆ ಅಗಲೀಕರಣಕ್ಕೆ ಕೆಡವಿದ ಮಸೀದಿ ಆವರಣ ಗೋಡೆ ಹಾಗೇ ಬಿಟ್ಟ ಗುತ್ತಿಗೆದಾರ

ಮಸೀದಿ ಆವರಣ ಗೋಡೆಯನ್ನು ಹಾದೇ ಬಿಟ್ಟಿರುವುದು

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ಮಂಜೇಶ್ವರ ಗ್ರಾ ಪಂ ವ್ಯಾಪ್ತಿಯ 20ನೇ ವಾರ್ಡ್ ಬಿ ಎಸ್ ನಗರದಲ್ಲಿ ಶಾಸಕರ ಫಂಡಿನಿಂದ ನಿರ್ಮಿಸಲಾಗುತ್ತಿರುವ ರಸ್ತೆಗಾಗಿ ಜನಪ್ರತಿನಿಧಿಗಳ ಮಾತಿನಂತೆ ತಮ್ಮ ಭೂಮಿಯನ್ನು ಬಿಟ್ಟು ಕೊಟ್ಟು ವರ್ಷಗಳೇ ಕಳೆದರೂ ಈ ತನಕ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆಗಾಗಿ ತಂದಿರಿಸಿದ ಜಲ್ಲಿಗಳನ್ನು ಕೂಡಾ ರಸ್ತೆ ಮದ್ಯದಲ್ಲೇ ಬಿಟ್ಟು ಗುತ್ತಿಗೆದಾರ ಪರಾರಿಯಾಗಿರುವುದಾಗಿ ಸ್ಥಳೀಯರ ಆರೋಪಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ದಿಢೀರ್ ಆಗಿ ಎಚ್ಚೆತ್ತುಗೊಂಡ ಹಣ ಸಂಗ್ರಹಕಾರರು ಕೆಡವಿದ ಗೋಡೆಗಳನ್ನು ಪುನರ್ ನಿರ್ಮಿಸಿದರೂ ಈ ಬಗ್ಗೆ ಮಾಧ್ಯಮಗಳ ಮುಂದೆ ಸತ್ಯವನ್ನು ತೆರೆದಿಟ್ಟ ಕಳೆದ 25 ವರ್ಷಗಳಿಂದ ಬೆನ್ನೆಲುಬು ತುಂಡಾಗಿ ಹಾಸಿಗೆಯಲ್ಲೇ ಮಲಗಿರುವ ಬಿ ಎಸ್ ನಗರ ನಿವಾಸಿ ಉಸ್ಮಾನ್ ಎಂಬವರು ಕಟ್ಟಿಸಿರುವ ಮಸೀದಿಯ ಆವರಣಗೋಡೆಯನ್ನು ಹಾಗೆಯೇ ಬಿಟ್ಟಿರುವುದಾಗಿ ಉಸ್ಮಾನ್ ಆರೋಪಿಸಿದ್ದಾರೆ.
ನನಗೆ ಹಾಸಿಗೆಯಿಂದ ಏಳಲು ಸಾಧ್ಯವಾಗದಿದ್ದರೂ ನನ್ನ ವಾಸ ಸ್ಥಳಕ್ಕೆ ಸುದ್ದಿಗಾರರನ್ನು ಕರೆಸಿ ಊರವರ ಹಿತೈಷಿಗಾಗಿ ಸತ್ಯವನ್ನು ತೆರೆದಿಟ್ಟಿದ್ದೆ. ಆದರೆ ಇದೀಗ ಕೆಲವರ ಆವರಣ ಗೋಡೆಗಳನ್ನು ಪುನರ್ ನವೀಕರಿಸಿದ್ದರೂ ನಾನು ಕಟ್ಟಿಸಿದ ಮಸೀದಿಯ ಆವರಣ ಗೋಡೆಯತ್ತಿರ ಸುಳಿಯಲೇ ಇಲ್ಲವೆಂಬುದಾಗಿ ಉಸ್ಮಾನ್ ಆರೋಪಿಸಿದ್ದಾರೆ. ಆವರಣ ಗೋಡೆ ಕಟ್ಟುವುದಾಗಿ ಹಣ ಸಂಗ್ರಹಿಸಿ ವರ್ಷಗಳೇ ಕಳೆದಿವೆ. ಮಾಧ್ಯಮಗಳಿಗೆ ಮಾಹಿತಿ ನೀಡಿದ ಧ್ವೇಷದಿಂದ ಉದ್ದೇಶಪೂರ್ವಕವಾಗಿ ಹೀಗೆ ಮಾಡಿರಬಹುದಾಗಿ ಅವರು ಹೇಳುತ್ತಿದ್ದಾರೆ. ಎಲ್ಲರಿಂದಲೂ ಹಣ ಸಂಗ್ರಹಿಸಿ ಆವರಣ ಗೋಡೆಗಳನ್ನು ಪುನರ್ ನಿರ್ಮಿಸಿ ಕೊಡುವುದಾಗಿ ಹೇಳಿದ ಜನಪ್ರತಿನಿಧಿ ಹಾಗೂ ಇಬ್ಬರು ಆತನ ಸಹಚರರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಂದು ಉಸ್ಮಾನ್ ಆರೋಪಿಸಿದ್ದಾರೆ.