ಆಧಾರ್ ಕಾರ್ಡಿಗಾಗಿ ಮುಂದುವರಿದ ಸಾಲು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಳೆದೆರಡು ದಿನಗಳಿಂದ ಮಂಗಳೂರಿನ ಪುರಭವನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿರುವ ಆಧಾರ್ ಅದಾಲತಿಗೆ ಬುಧವಾರವೂ ಭಾರೀ ಸರದಿ ಸಾಲು ಮುಂದುವರಿದಿದೆ.

ಇ ಆಡಳಿತ ಕೇಂದ್ರ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಆಧಾರ್ ಅದಾಲತ್ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯ ಮುಂಜಾನೆಯಿಂದಲೇ ನಡೆಯುತ್ತಿದೆ. ಕಳೆದೆರಡು ದಿನಗಳಿಂದಲೂ ಅತ್ಯಧಿಕ ಸಂಖ್ಯೆಯಲ್ಲಿ ಜನತೆ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಆಧಾರ್ ತಿದ್ದುಪಡಿ, ನೂತನ ಆಧಾರ್ ಕಾರ್ಡ್ ಮಾಡಿಸಲು ದೂರದೂರಿನಿಂದ ಬಂದವರು ಸರದಿ ಸಾಲಿನಲ್ಲಿ ಕಾಯುತ್ತಿರುವುದು ಕಂಡು ಬರುತ್ತಿದೆ. ಹೀಗಿದ್ದರೂ ಇಲ್ಲಿನ ಕ್ಯೂ ನಿಲ್ಲುವವರ ಸಂಖ್ಯೆ ಕಡಿಮೆಯಾಗಿಲ್ಲ. ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಒಮ್ಮೆ ಆಧಾರ್ ಕಾರ್ಡ್ ಮಾಡಿದರೆ ಸಾಕಪ್ಪಾ ಎಂದು ಹಂಬಲಿಸುವ ಮಂದಿ ಇಲ್ಲಿ ಕಂಡು ಬರುತ್ತಿದ್ದಾರೆ.

ಸರಕಾರ ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ನಾವು ಆಧಾರ್ ಕಾರ್ಡ್ ಅಗತ್ಯ ಬೇಕಾಗಿಲ್ಲ ಎಂದು ಸುಮ್ಮನಾಗಿದ್ದೆವು. ಆದರೆ ಇದೀಗ ಕೇಂದ್ರ ಸರಕಾರವೇ ಇದನ್ನು ಕಡ್ಡಾಯಮಾಡಿದೆ. ಹೀಗಾಗಿ ಆಧಾರ್ ಕಾರ್ಡ್ ಹೊಂದುವುದು ಅನಿವಾರ್ಯವಾಗಿದೆ. ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಇಲ್ಲಿ ಸರದಿ ಸಾಲಿನಲ್ಲಿ ನಿಂತರೆ ನಮ್ಮ ಒಂದು ದಿನವೇ ಇಲ್ಲಿ ಕಳೆದು ಹೋಗುತ್ತಿದೆ. ಕೂಲಿ ಮಾಡಿಕೊಂಡು ಬದುಕುತ್ತಿರುವ ಜನಸಾಮಾನ್ಯರಿಗೆ ಸರಿಯಾದ ಸುಸಜ್ಜಿತ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲವೇ ಎಂದು ನೋವಿನಿಂದ ಪ್ರಶ್ನಿಸುತ್ತಾರೆ ಫರಂಗಿಪೇಟೆಯ ಮಂಜುನಾಥ್.