ಮಹಿಳೆ ಸಾವು, 20ಕ್ಕೂಅಧಿಕ ಮಂದಿಗೆ ಗಾಯ

ಕಂಟೈನರ್ ಲಾರಿ, ಖಾಸಗಿ ಬಸ್ ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕುಲಶೇಖರದ ಕಡೆಯಿಂದ ಬಂದ ಖಾಸಗಿ ಬಸ್ ಮತ್ತು ಕದ್ರಿ ಪದುವಾ ಕಡೆಯಿಂದ ಪಂಪ್ವೆಲ್ಲಿಗೆ ತೆರಳುತ್ತಿದ್ದ ಕಂಟೈನರ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿ 20ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ನಂತೂರು ಸರ್ಕಲ್ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ವಾಮಂಜೂರಿನ ಕವಿತಾ (50) ಮೃತ ಮಹಿಳೆ. ಬಸ್ಸಿನಲ್ಲಿ ಮಂಗಳೂರು ನಗರಕ್ಕೆ ಬರುತ್ತಿದ್ದ ಹಲವು ಮಂದಿ ಗಾಯಗೊಂಡು ನಗರದ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

ಈ ಅಪಘಾತಕ್ಕೆ ಲಾರಿ ಚಾಲಕ ಮತ್ತು ಬಸ್ ಚಾಲಕನ ಅಜಾಗರೂಕತೆಯ ಚಾಲನೆಯೇ ಕಾರಣ. ಸಂಚಾರಿ ಪೊಲೀಸರು ಇದ್ದರೂ ನಿಯಮ ಉಲ್ಲಂಘಿಸಿ ಇಬ್ಬರೂ ಚಾಲಕರು ತಮ್ಮ ವಾಹನ ಚಲಾಯಿಸಿದ್ದಾರೆ. ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ ಬಳಿಕ ಮುಂಭಾಗದಲ್ಲಿ ನಿಂತಿದ್ದ ಕಾರಿಗೂ ಡಿಕ್ಕಿ ಹೊಡೆಸಿ

ಹಾನಿ ಮಾಡಿದೆ. ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಕಂಟೈನರ್ ಲಾರಿ ಡಿಕ್ಕಿ ಹೊಡೆದು ಮುಂದಕ್ಕೆ ಚಲಿಸಿ ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಆದರೆ ಆತ ಅದೃಷ್ಟವಶಾತ್ ಪಾರಾಗಿದ್ದಾನೆ.

ಅಪಘಾತದಿಂದಾಗಿ ಇಲ್ಲಿ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಂ ಉಂಟಾಗಿತ್ತು. ಇಲ್ಲಿ ಅಳವಡಿಸಿದ ಸೀಸಿಟೀವಿಯಲ್ಲಿ ರಸ್ತೆ ಅಪಘಾತದ ವಿಡಿಯೋ ರೆಕಾರ್ಡ್ ಆಗಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕದ್ರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY