ಮಲಯಾಳ ಕಡ್ಡಾಯಕ್ಕೆ ಗ್ರಾಹಕರ ವೇದಿಕೆ ವಿರೋಧ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ರಾಜ್ಯದ ಶಾಲೆಗಳಲ್ಲಿ ಕಡ್ದಾಯ ಮಲೆಯಾಳ ಕಲಿಯಬೇಕೆಂಬ ಸರಕಾರದ ನಿರ್ದೇಶನಕ್ಕೆ ಮಂಜೇಶ್ವರ ಗ್ರಾಹಕರ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

ಗಡಿನಾಡ ಕನ್ನಡಿಗರ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡನ್ನು ರಾಜ್ಯ ಸರಕಾರದ ಕರಾಳ ಮಸೂದೆಯಿಂದ ಹೊರತುಪಡಿಸಬೇಕೆಂದು ಮಂಜೇಶ್ವರ ಗ್ರಾಹಕರ ವೇದಿಕೆ ಒತ್ತಾಯಿಸಿದೆ. ಕನ್ನಡವನ್ನು ನಾಶ ಮಾಡಲು ಹೊರಟಿರುವ ರಾಜ್ಯ ಸರಕಾರದ ಈ ತೀರ್ಮಾನ ಕಾಸರಗೋಡು ಜಿಲ್ಲೆಯ ಸಂಸ್ಕೃತಿಯ ಮೇಲೆ ಭಾರೀ ಪರಿಣಾಮ ಬೀರಲಿರುವುದಾಗಿ ಗ್ರಾಹಕ ವೇದಿಕೆ ಅಭಿಪ್ರಾಯಪಟ್ಟಿದೆ.

ಭಾಷಾ ಅಲ್ಪಸಂಖ್ಯಾತರಿಗೆ ಅವರ ಹಕ್ಕುಗಳನ್ನು ರಕ್ಷಿಸುವ ಹಕ್ಕಿದೆ. ಇದರ ವಿರುದ್ಧ ಯಾವುದೇ ಕಾನೂನುಗಳನ್ನು ಕಡ್ಡಾಯವಾಗಿ ಹೇರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ನಿಟ್ಟಿನಲ್ಲಿ ಮಲಯಾಳ ಕಡ್ಡಾಯ ಮಸೂದೆಯನ್ನು ಹಿಂಪಡೆಯಬೇಕೆಂಬ ಬೇಡಿಕೆಯೊಂದಿಗೆ ಮೇ 23ರಂದು ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ  ವೇದಿಕೆಯ ಅಧ್ಯಕ್ಷ ಮುರಳೀಧರ್ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಉದ್ಯಾವರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.