ಮಂಗಳೂರಿಗೆ ಆಹಾರ ವಿಶ್ಲೇಷಣಾ ಲ್ಯಾಬ್ ಅವಶ್ಯಕ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಎಲ್ಲೆಲ್ಲೂ ಆಹಾರ ಕಲಬೆರಕೆ ಹಾವಳಿ ಹೆಚ್ಚಾಗಿರುವುದರಿಂದ ಮಂಗಳೂರು ನಗರಕ್ಕೆ ಆಹಾರ ವಿಶ್ಲೇಷಣಾ ಪ್ರಯೋಗಾಲಯ ಅತ್ಯವಶ್ಯಕ ಎಂದು ಗ್ರಾಹಕ ಸಂಘಟನೆಯ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಂ ಜೆ ಸಾಲಿಯಾನ್ ಹೇಳಿದರು.

ಅವರು ಇತ್ತೀಚೆಗೆ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಂಘಟಿಸಿದ್ದ ರಾಷ್ಟ್ರೀಯ ಗ್ರಾಹಕ ದಿನಾಚರಣೆಯಲ್ಲಿ ಮಾತನಾಡುತ್ತಾ, “ಆಹಾರದಂತೆ ಹಾಲಿನಲ್ಲೂ ಕಲಬೆರಕೆಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೈಸೂರು ಆಹಾರ ಪ್ರಯೋಗಾಲಯದ ರೀತಿಯಲ್ಲಿ ಮಂಗಳೂರಿಗೂ ಆಹಾರ ಪ್ರಯೋಗಾಲಯದ ಅವಶ್ಯಕತೆ ಇದೆ” ಎಂದು ಹೇಳಿದರು.

ನಂತರ ಅವರು ಆಹಾರ ಪ್ರಯೋಗಾಲಯ ಅಸ್ಥಿತ್ವಗೊಳಿಸಲು ವಿಜ್ಞಾಪನಾ ಪತ್ರವೊಂದನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು ಟಿ ಖಾದರಗೆ ಸಲ್ಲಿಸಿದರು.

“ವಿದ್ಯಾರ್ಥಿಗಳಿಗೆ ತಮ್ಮ ಹಕ್ಕುಗಳ ಅರಿವಿದ್ದರೆ, ಶೋಷಣೆಯ ವಿರುದ್ಧ ಧ್ವನಿ ಎತ್ತುವ ಶಕ್ತಿ ಬರುತ್ತದೆ” ಎಂದು ಸಚಿವ ಯು ಟಿ ಖಾದರ್ ಹೇಳಿದರು.

ಇದೇ ವೇಳೆ ಅವರು, “ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಕ್ರಿಯೆಯಲ್ಲಿ ಎದುರಾಗಿರುವ ನಿಧಾನ ಗತಿಯ ಸಮಸ್ಯೆಯನ್ನು ಸರ್ಕಾರ ಸ್ಥಗಿತಗೊಳಿಸಲು ನಿರ್ಧರಿಸಿದೆ” ಎಂದÀರು.

ಇದೇ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷೆ ಸಿ ವಿ ಶೋಭಾ, “ಇತ್ತೀಚಿನ ದಿನಗಳಲ್ಲಿ ಔಷಧಿ ನಿರ್ಲಕ್ಷ್ಯತೆಯ ಪ್ರಕರಣಗಳು ಹೆಚ್ಚಾಗಿವೆ” ಎಂದು ಆತಂಕ ವ್ಯಕ್ತಪಡಿಸಿದರು.