ಹೈಲ್ಯಾಂಡಿನ ಒಳಗಿನ ರಸ್ತೆ ಬದಿ ಗೋಡೆ ನಿರ್ಮಾಣ ಮಾಡಿ

ನಗರದ ಕೆಲವು ಪ್ರದೇಶಗಳಲ್ಲಿ ಕಂದಕದಂತಹ ಆಳವಾದ ಜಾಗಗಳಿವೆ. ಕೆಲವು ಇಂತಹ ಕಂದಕಗಳು ರಸ್ತೆಗಳ ಬದಿಯಲ್ಲೇ ಇವೆ. ಈ ಮೊದಲು ಕರಂಗಲಪಾಡಿಯಿಂದ ಕೋರ್ಟ್ ರಸ್ತೆಗೆ ಬರುವಾಗ ಸಂತ ಅಲೋಶಿಯಸ್ ತಾಂತ್ರಿಕ ಶಾಲೆಯಿಂದ ಕೋರ್ಟಿಗೆ ತಿರುಗುವ ರಸ್ತೆತನಕ ಬಲಬದಿಯಲ್ಲಿ ಉದ್ದಕ್ಕೂ ಕಂದಕವಿತ್ತು. ಆದರೆ ಈಗ ಅಲ್ಲಿ ರಸ್ತೆ ಅಗಲೀಕರಣ ಹಾಗೂ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದೆ. ಇದಲ್ಲದೆ ಫಳ್ನೀರ್ ಸೋಜಾ ಹ್ಯಾಚರೀಸ್ ಮುಂಭಾಗದಲ್ಲಿ ಸಹ ರಸ್ತೆ ಬದಿಯಲ್ಲಿ (ಬಿ ವಿ ರಸ್ತೆಗೆ ಹೋಗುವ ರಸ್ತೆ) ಆಳವಾದ ಕಂದಕವಿದ್ದು ಈ ರಸ್ತೆ ಬದಿಯ ಜಾಗದಲ್ಲಿ ಕಂಪೌಂಡ್ ಗೋಡೆ ಇಲ್ಲದೆ ವಾಹನ ಓಡಿಸುವವರಿಗೆ ಭಯಾನಕ ವಾತಾವರಣವನ್ನು ಸೃಷ್ಟಿಸುತ್ತಿದೆ.

ಈ ಕಂದಕದಂತಹ ಜಾಗದಲ್ಲಿ ಹಲವು ಮನೆಗಳಿವೆ. ಮಳೆಗಾಲದಲ್ಲಿ ಇಲ್ಲಿ ರಸ್ತೆಯಲ್ಲಿ ಹರಿದಾಡುವ ನೀರು ಸುಗ್ಗಿ ಇಲ್ಲಿನ ಪ್ರದೇಶದಲ್ಲಿ ಧಾರಾಳ ನೀರು ಸಂಗ್ರಹವಾಗಿ ನಿಂತು ದೊಡ್ಡ ಕೆರೆಯಂತೆ ಕಾಣುತ್ತಿದೆ. ಡೆಂಗ್ಯೂ, ಮಲೇರಿಯಾ ರೋಗ ಹಬ್ಬಲು ಇದೊಂದು ನುಸಿ ಉತ್ಪನ್ನ ಮಾಡುವ ತಾಣವಾಗಿದೆ. ಏಳೆಂಟು ವರ್ಷಗಳ ಹಿಂದೆ ಈ ಜಾಗಕ್ಕೆ ರಸ್ತೆ ಬದಿಯಲ್ಲಿ ಗೋಡೆ ಇದ್ದು ವಾಹನ ಬಿಡುವವರಿಗೆ ಅಂದರೆ ಮುಖ್ಯವಾಗಿ ದ್ವಿಚಕ್ರ ವಾಹನ ಚಾಲಕರಿಗೆ ಅಷ್ಟೊಂದು ಸಮಸ್ಯೆ ಕಾಡುತ್ತಿರಲಿಲ್ಲ.ಆದರೆ ಇತ್ತೀಚೆಗಿನ ದಿನಗಳಲ್ಲಿ ವಾಹನ ಸಾಂದ್ರತೆ ಜಾಸ್ತಿ ಇದ್ದು, ಈ ಕಂದಕವಿರುವ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ವಾಹನ ಬಂದರೆ ಇಲ್ಲಿ ದೊಡ್ಡ ಫಜೀತಿ ನಿರ್ಮಾಣವಾಗುತ್ತದೆ. ಜಾಸ್ತಿ ಬದಿಗೆ ಹೋದರೆ ರಸ್ತೆ ಬದಿ ಕುಸಿದು ಹೋಗಿ ವಾಹನ ಹೊಂಡಕ್ಕೆ ಬೀಳುವ ಭೀತಿ ಉದ್ಭವಿಸುತ್ತದೆ. ಅದಕ್ಕಾಗಿ ಮನಪಾ ವತಿಯಿಂದ ಈ ಅಪಾಯವನ್ನೊಡ್ಡುವ ಗಂಡಾಂತರದ ರಸ್ತೆ ಬದಿಗೆ ಬಲಿಷ್ಠ ಗೋಡೆ ನಿರ್ಮಾಣ ಮಾಡುವರೆ ಕ್ರಮ ತೆಗೆದುಕೊಳ್ಳಬೇಕೆಂಬ ಬೇಡಿಕೆ.

  • ಜೆ ಎಫ್ ಡಿಸೋಜ, ಅತ್ತಾವರ