ಆತ್ಮಾವಲೋಕನದ ಸುಳಿಯಿಂದ ಹೊರಬರದ ಕಾಂಗ್ರೆಸ್ಸಿನ ದುರವಸ್ಥೆ

ಕಳೆದ ಹಲವು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆತ್ಮಾವಲೋಕನದ ಪ್ರಯತ್ನಗಳು ನಡೆಯುತ್ತಲೇ ಇವೆ.

ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆಗಳು ಅವಶ್ಯ ಎಂದು ಹೇಳಿದ್ದ ರಾಹುಲ್ ಗಾಂಧಿ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಗಳಲ್ಲಿ ಧೂಳಿಪಟವಾದ ಒಂದು ತಿಂಗಳ ನಂತರ  ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಆತ್ಮಾವಲೋಕನದ ಹಾದಿ ಹಿಡಿದಿದೆ. ಕಳೆದ ಹಲವು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆತ್ಮಾವಲೋಕನದ ಪ್ರಯತ್ನಗಳು ನಡೆಯುತ್ತಲೇ ಇವೆ. ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರ ಅಸಮಧಾನ ಹೆಚ್ಚಾಗುತ್ತಿದ್ದು ಪಕ್ಷದ ನಾಯಕತ್ವ ಹಲವಾರು ಗೊಂದಲ ಮತ್ತು ಸವಾಲುಗಳನ್ನು ಎದುರಿಸುತ್ತಿದೆ.

ಪಕ್ಷದ ನಾಯಕರೂ ಸಹ ತಮ್ಮ ಕ್ರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿಕಟವರ್ತಿಗಳ ಮಾಹಿತಿಯ ಅನುಸಾರ ಪಕ್ಷದ ವರಿಷ್ಠರು  ರಾಜ್ಯಗಳಲ್ಲಿ ಸ್ಥಳೀಯ ನಾಯಕರೊಡನೆ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಏರ್ಪಡಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.

ಪಕ್ಷದ ತೀವ್ರ ಹಿನ್ನಡೆಯ ನಂತರದಲ್ಲಿ ರಾಹುಲ್ ಗಾಂಧಿಯ ನಾಯಕತ್ವವನ್ನೂ ಪ್ರಶ್ನಿಸಲಾಗುತ್ತಿದೆ. ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದ ಸೋನಿಯಾ ಗಾಂಧಿ ಹಿಂದಿರುಗಿ ಬಂದಿದ್ದು ಈವರೆಗೂ ಪಕ್ಷದಲ್ಲಿ ಯಾವುದೇ ಸಭೆಯನ್ನು ಏರ್ಪಡಿಸಿಲ್ಲ.

ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆಗಳು ಅವಶ್ಯ ಎಂದು ಹೇಳಿದ್ದ ರಾಹುಲ್ ಗಾಂಧಿ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಪಕ್ಷ ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಹುಲ್ ನಾಯಕತ್ವವನ್ನೇ ಪ್ರಶ್ನಿಸಲಾಗುತ್ತಿದೆ.

ಗೋವಾದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ರಾಹುಲ್ ಗಾಂಧಿಯೇ ಕಾರಣ ಎಂದು ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ವಿಶ್ವಜಿತ್ ರಾಣೆ ಹೇಳಿರುವುದು ಪಕ್ಷವನ್ನು ಕಂಗೆಡಿಸಿದೆ. ರಾಹುಲ್ ಗಾಂಧಿ ಗೋವಾದ ಜನತೆಯ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸದೆಯೇ ಸರ್ಕಾರ ರಚಿಸುವ ಅವಕಾಶವನ್ನೂ ಕೈಚೆಲ್ಲಿದ್ದಾರೆ ಎಂದು ರಾಣೆ ಆರೋಪಿಸಿದ್ದಾರೆ.

ಪಕ್ಷಕ್ಕೆ ಇಂದು ಗಂಭೀರವಾಗಿ ಯೋಚಿಸುವ ಪ್ರಬುದ್ಧ ನಾಯಕತ್ವದ ಅವಶ್ಯಕತೆ ಇದ್ದು ರಾಹುಲ್ ಗಾಂಧಿ ಇಂತಹ ನಾಯಕತ್ವ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ರಾಣೆ ಆರೋಪಿಸಿದ್ದಾರೆ. ಐದು ರಾಜ್ಯಗಳ ಚುನಾವಣೆಗಳಲ್ಲಿ ಗೋವಾ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿದ್ದರೂ ಸರ್ಕಾರ ರಚಿಸಲು ಯಾವುದೇ ಪ್ರಯತ್ನ ಮಾಡದೆ ಇರುವುದು ಪಕ್ಷದೊಳಗಿನ ಅಸಮಧಾನಕ್ಕೆ ಕಾರಣವಾಗಿದೆ. ಪಂಜಾಬದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ರಚಿಸಲು ಸಾಧ್ಯವಾಗಿದೆ.