ಮನೆ ಹಂಚಿಕೆಯಲ್ಲಿ ಬಿಜೆಪಿ ಶಾಸಕ ಸುನಿಲ್ ಸ್ವಜನ ಪಕ್ಷಪಾತ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಶಾಸಕ ಸುನಿಲ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿದರು

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ರಾಜ್ಯ ಸರಕಾರದ ವತಿಯಿಂದ ವಿವಿಧ ವಸತಿ ಯೋಜನೆಯಡಿ ಕಾರ್ಕಳ ತಾಲೂಕಿಗೆ ಮಂಜೂರಾದ ಮನೆಗಳ ಹಂಚಿಕೆಯಲ್ಲಿ ಕಾರ್ಕಳ ಶಾಸಕ ಸುನಿಲಕುಮಾರ್ ಸ್ವಜನಪಕ್ಷಪಾತ ಮಾಡಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮಂಗಳವಾರ ಕಾರ್ಕಳ ತಾಲೂಕು ಪಂಚಾಯತ್ ಎದುರು ಪ್ರತಿಭಟನೆ ನಡೆಸಿತು.

ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, “ರಾಜ್ಯ ಸರಕಾರ ಮಂಜೂರಾತಿಗೊಳಿಸಿದ ಸುಮಾರು 1,160 ಮನೆಗಳಲ್ಲಿ ಬಹುತೇಕ ಮನೆಗಳನ್ನು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಹಂಚಿಕೆ ಮಾಡುವ ಮೂಲಕ ಶಾಸಕ ಸುನಿಲಕುಮಾರ್ ಸ್ವಜನಪಕ್ಷಪಾತ ನಡೆಸಿ ಆ ಮೂಲಕ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿದ್ದಾರೆ” ಎಂದರು.

“ಸರಕಾರದ ಯಾವುದೇ ಸವಲತ್ತುಗಳ ವಿತರಣೆಯಲ್ಲಿ ತಮ್ಮ ಪಕ್ಷದ ಕಚೇರಿಯಲ್ಲಿ ಅಧಿಕಾರಿಗಳನ್ನು ಕರೆಯಿಸಿ ವಿತರಿಸುವ ಮೂಲಕ ರಾಕೀಯ ಮಾಡುತ್ತಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾದೀತು” ಎಂದು ಎಚ್ಚರಿಸಿದರು.

ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಮಾತನಾಡಿ, “ಕಾರ್ಕಳ ಶಾಸಕ ಸರಕಾರದ ವಸತಿ ಯೋಜನೆಯ ಮನೆಗಳ ಹಂಚಿಕೆಯಲ್ಲಿ ರಾಜಕೀಯ ಮಾಡುತ್ತಿದ್ದು, ಅವರು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅನರ್ಹ. ಈಗಾಗಲೇ ಹಂಚಿಕೆಯಾಗಿರುವ ಮನೆಗಳನ್ನು ಮರುಹಂಚಿಕೆ ಮಾಡದಿದ್ದಲ್ಲಿ ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.

ಜಿ ಪಂ ಮಾಜಿ ಸದಸ್ಯ ಮಂಜುನಾಥ ಪೂಜಾರಿ ಮಾತನಾಡಿ, “ಸರಕಾರದ ಯೋಜನೆಗಳನ್ನು ಶಾಸಕರು ತಮ್ಮ ವೈಯಕ್ತಿಕ ಯೋಜನೆಯಂತೆ ಬಿಂಬಿಸಿ ತಮ್ಮದೇ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಹಂಚುತ್ತಿದ್ದು, ಇದರಿಂದ ಅರ್ಹ ಫಲಾನುಭವಿಗಳು ಅವಕಾಶ ವಂಚಿತರಾಗಿದ್ದಾರೆ” ಎಂದು ಆರೋಪಿಸಿದರು.