`ಆರ್ ಟಿ ಒ ಶುಲ್ಕ ಹೆಚ್ಚಳ ಮಾಡಿದ್ದು ಅಧಿಕಾರಿಗಳು, ಪ್ರಧಾನಿ ಮೋದಿಯಲ್ಲ’

ಬಿಜೆಪಿಯ ಭಂಡಾರಿ ಹೇಳಿಕೆಗೆ ಕಾಂಗ್ರೆಸ್ ವ್ಯಂಗ್ಯ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಪ್ರಾದೇಶಿಕ ಸಾರಿಗೆ ಇಲಾಖೆಯು ಸರಕಾರಿ ಶುಲ್ಕವನ್ನು ಹೆಚ್ಚಳ ಮಾಡಿದೆ, ಇದರಿಂದ ಬಡ ರಿಕ್ಷಾ ಚಾಲಕರು ಕಷ್ಟಪಡುವಂತಾಗಿದೆ, ಶುಲ್ಕ ಹೆಚ್ಚಳ ಮಾಡಿರುವುದು ಕೇಂದ್ರ ಸರಕಾರವಲ್ಲ, ಅದು ಅಧಿಕಾರಿಗಳ ಕೆಲಸವಾಗಿದೆ, ಪ್ರಧಾನಿ ಮೋದಿಗೆ ಸಂಗತಿಯೇ ಗೊತ್ತಿಲ್ಲ ಎಂದು ಪುತ್ತೂರಿನ ಬಿಜೆಪಿ ಮುಖಂಡ ಡಾ ಪ್ರಸಾದ್ ಭಂಡಾರಿ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಮಾಧ್ಯಮದ ಜೊತೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಝಲ್ ರಹೀಂ, “ಯಾವುದೇ ಶುಲ್ಕ ಹೆಚ್ಚಳ ಮಾಡಬೇಕಾದರು ಆ ಕಾನೂನು ಸಂಸತ್ತಿನಲ್ಲಿ ಮಂಡನೆಯಾಗಬೇಕು, ಸಂಸತ್ತಿನಲ್ಲಿ ಮಂಡನೆಯಾದ ಕಾನೂನು ಪ್ರಧಾನಿಗೆ ಗೊತ್ತಿರುತ್ತದೆ. ಪ್ರಧಾನಿ ಮೋದಿಗೆ ಗೊತ್ತಿದ್ದೇ ಕಾನೂನು ಜಾರಿಗೆ ಬರುತ್ತದೆ. ಆರ್ ಟಿ ಒ ಶುಲ್ಕ ಹೆಚ್ಚಳವಾಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಜನರನ್ನು ಮರಳು ಮಾಡಲು ಬಿಜೆಪಿ ನಾಯಕ ಸುಳ್ಳು ಹೇಳುತ್ತಿದ್ದಾರೆ” ಎಂದು ಹೇಳಿದರು.

“ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ, ಕೆಲಸವಿಲ್ಲದೆ ಜನರು ಪರದಾಡುತ್ತಿದ್ದಾರೆ. ಹಣವಿದ್ದರೂ ವ್ಯವಹಾರ ಮಾಡದಂತ ದುಃಸ್ಥಿತಿ ನಿರ್ಮಾಣವಾಗಿದೆ. ಇದೀಗ ಪ್ರತಿಯೊಂದು ಇಲಾಖೆಯಲ್ಲೂ ಸರಕಾರಿ ಶುಲ್ಕ ಹೆಚ್ಚಳ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಮೋದಿ ಸಂಘಪರಿವಾರ ಸಂಘಟನೆಗಳಿಂದ ತೀವ್ರ ವಿರೋಧವನ್ನು ಎದುರಿಸುತ್ತಿದ್ದಾರೆ. ಜನರನ್ನು ವಂಚನೆ ಮಾಡುವ ಉದ್ದೇಶದಿಂದ ಬಿಜೆಪಿ ನಾಯಕರು ಅಧಿಕಾರಿಗಳತ್ತ ಬೆರಳು ತೋರಿಸಿ ಅದು ಮೋದಿ ಮಾಡಿದ್ದಲ್ಲ ಅಧಿಕಾರಿಗಳು ಮಾಡಿದ್ದು ಎಂದು ಹೇಳುತ್ತಿರುವುದು ದೊಡ್ಡ ಜೋಕ್” ಎಂದು ಹೇಳಿದರು.

“ಸಾರಿಗೆ ಶುಲ್ಕ ಕಡಿಮೆ ಮಾಡುವಂತೆ ತಾನು ಮೋದಿಗೆ ಪತ್ರ ಬರೆಯುವುದಾಗಿ ಪ್ರಸಾದ್ ಭಂಡಾರಿ ಹೇಳಿದ್ದಾರೆ, ಅವರು ಪತ್ರ ಬರೆದು ಶುಲ್ಕ ಕಡಿಮೆ ಮಾಡಿದರೆ ಭಂಡಾರಿಯವರನ್ನು ಸನ್ಮಾನ ಮಾಡಲಾಗುವುದು” ಎಂದು ಕಾಂಗ್ರೆಸ್ ಮುಖಂಡ ಅಮಲ ರಾಮಚಂದ್ರ ಹೇಳಿದರು.