ತ್ರಿಶೂರ್ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆ ಹೆಸರು ಬಹಿರಂಗಪಡಿಸಿದ ಕಾಂಗ್ರೆಸ್ ಶಾಸಕ ಪೇಚಿಗೆ

ಜಯಂತನ್

ತ್ರಿಶೂರು : ಸಿಪಿಐಎಂ ವಡಕ್ಕಂಚ್ಚೇರಿ ಕೌನ್ಸಿಲರ್ ಜಯಂತನ್ ಮತ್ತು ಇತರ ಮೂವರು ಎರಡು ವರ್ಷದ ಹಿಂದೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದಲ್ಲದೆ, ರಾಜಕೀಯ ಪ್ರಭಾವ ಬಳಸಿ ಪ್ರಕರಣ ಮುಚ್ಚಿಡಲು ಪ್ರಯತ್ನಿಸಿದ್ದರು ಎಂದು ತ್ರಿಶೂರಿನ 32ರ ಹರೆಯದ ಮಹಿಳೆಯೊಬ್ಬರು ಅಕ್ಟೋಬರಿನಲ್ಲಿ ಬಹಿರಂಗಪಡಿಸಿದ್ದು, ಅತ್ಯಾಚಾರಕ್ಕೊಳಗಾದ ಮಹಿಳೆಯ ಹೆಸರು ಬಹಿರಂಗಪಡಿಸಿರುವ ಕಾಂಗ್ರೆಸ್ ಶಾಸಕ ಅನಿಲ್ ಅಕ್ಕರ್ ಈಗ ಪೇಚಿಗೆ ಸಿಲುಕಿದ್ದಾರೆ.

ಅನಿಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಹಿಳೆಯ ದೂರು ಅನಾವರಣಗೊಳಿಸುತ್ತ ಎರಡು ಬಾರಿ ಆಕೆಯ ಹೆಸರೆತಿ ಹೇಳುತ್ತ, ಪೊಲೀಸರು ಪ್ರಕರಣದ ಸೂಕ್ತ ತನಿಖೆ ನಡೆಸಿಲ್ಲ ಎಂದು ಆರೋಪಿಸಿದರು.

ಈ ಘಟನೆಯ ಹಿನ್ನೆಲೆಯಲ್ಲಿ ಪರಪೂಕ್ಕರದ ರವಿ ಎಂಬವರು ಸಹಾಯಕ ಪೊಲೀಸ್ ಆಯುಕ್ತರಿಗೆ ದೂರೊಂದು ನೀಡಿ, ಶಾಸಕ ಶಿಕಾರ್ಹ ಅಪರಾಧವೆಸಗಿದ್ದಾರೆಂದು ಹೇಳಿದ್ದಾರೆ.

ಮಹಿಳೆಯ ಲಿಖಿತ ಸಹಮತಿ ಪಡೆದುಕೊಂಡೇ ತಾನು, ಆಕೆಯ ಹೆಸರೆತ್ತಿ ವಿವರಿಸಿದ್ದೇನೆ ಎಂದು ನಿನ್ನೆ ಅನಿಲ್ ಸ್ಪಷ್ಟಪಡಿಸಿದರು.

ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯ ಗುರುತು ಪ್ರಕಟಿಸಿರುವುದು ಕಾನೂನುಬಾಹಿರವಾಗಿದೆ. ಘಟನೆಯ ಬಗ್ಗೆ ವಿವರಿಸುವಾಗ (ಓದಿ ಹೇಳುವಾಗ) ಆಕಸ್ಮಿಕವಾಗಿ ಆಕೆಯ ಹೆಸರು ಓದಿದ್ದೇನಷ್ಟೇ ಎಂದು ಅನಿಲ್ ಹೇಳಿದರು.

ಇದಕ್ಕಿಂತ ಮುಂಚೆ ತ್ರಿಶೂರ್ ಜಿಲ್ಲಾಧ್ಯಕ್ಷ ರಾಧಾಕೃಷ್ಣನ್ ಕೂಡಾ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯ ಹೆಸರು ಬಹಿರಂಗಪಡಿಸಿದ್ದರು. ಈ ಬಗ್ಗೆ ಪೊಲೀಸರು ರಾಧಾಕೃಷ್ಣನ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.