ಲಾಠಿ ಏಟು ಖಂಡನೆಗೆ ಕಾಂಗ್ರೆಸ್ ಸಭೆ

 ರೈ ವಿರುದ್ಧ ಆರೋಪ,  ಚಕಮಕಿ

ನಮ್ಮ ಪ್ರತಿನಿಧೀ ವರದಿ

ಮಂಗಳೂರು : ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ಖುರೇಷಿ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನ್ಯಾಯ ಕೊಡಿಸಿ ಎಂದು ಕೇಳಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಹಲ್ಲೆಯ ವಿರುದ್ಧ ನಗರದ ಬಂದರು ಪ್ರದೇಶದಲ್ಲಿರುವ ಝೀನತ್ ಭಕ್ಷ್ ಸಭಾಂಗಣದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಕಾರ್ಯಕರ್ತರ ಸಭೆ ಜರಗಿತು.

ಘಟನೆಯನ್ನು ಖಂಡಿಸಿ ನಡೆದ ಮುಸ್ಲಿಂ ಮುಖಂಡರ, ಕಾಂಗ್ರೆಸ್ ನಾಯಕರ ಸಭೆ ಕೂಡಾ ವಾಗ್ವಾದ, ಹೊಯ್‍ಕೈ, ವಾಕ್ಸಮರಕ್ಕೆ ಕಾರಣವಾಗುವ ಮೂಲಕ ವಿವಾದಮಯವಾಯಿತು.

“ದೌರ್ಜನ್ಯಕ್ಕೊಳಗಾಗಿರುವ ಖುರೇಷಿಗೆ ಪರಿಹಾರವನ್ನು ನೀಡಬೇಕು. ಸಂಪೂರ್ಣವಾಗಿ ವೈದ್ಯಕೀಯ ವೆಚ್ಚವನ್ನು ಭರಿಸಬೇಕು. ಈಗಿರುವ ಸಿಸಿಬಿ ತಂಡವನ್ನು ಬರ್ಕಾಸ್ತುಗೊಳಿಸಿ ತಂಡಕ್ಕೆ ಹೊಸಬರ ನೇಮಕ ಮಾಡಬೇಕು. 15 ದಿನಗಳೊಳಗೆ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಮತ್ತೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ” ಎಂದು ಕಾಂಗ್ರೆಸ್‍ನ ಮುಖಂಡ, ಮಾಜಿ ಮೇಯರ್ ಅಶ್ರಫ್ ಹೇಳಿದರು.

ಖುರೇಷಿಗೆ ಹಲ್ಲೆ ನಡೆಸಿದ ಸಿಸಿಬಿ ತಂಡದಲ್ಲಿ ಹೆಚ್ಚಿನ ಅಧಿಕಾರಿಗಳು, ಪೊಲೀಸರು ಕಳೆದ 15 ವರ್ಷಗಳಿಂದ ಇದ್ದವರಾಗಿದ್ದು, ತಂಡವನ್ನು ಕೂಡಲೇ ಬರ್ಕಾಸ್ತುಗೊಳಿಸಿ ಹೊಸಬರನ್ನು ನೇಮಕ ಮಾಡಬೇಕು. ಸಿಸಿಬಿ ಇನ್ಸ್‍ಪೆಕ್ಟರ್ ಸುನಿಲ್ ನಾಯ್ಕ್‍ನನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಈ ನಡುವೆ ಸಭೆಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬರು, “ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಚಾರ ತಿಳಿದಿಲ್ಲವೇ ? ಅವರು ಯಾಕೆ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿಲ್ಲ?” ಎಂದು ಪ್ರಶ್ನಿಸಿದಾಗ, ಇನ್ನೊಬ್ಬ ಸದಸ್ಯರು ಮಾತನಾಡಿ ಇಲ್ಲಿ ರಾಜಕೀಯ ನಾಯಕರ ಬಗ್ಗೆ ಮಾತನಾಡಬೇಡಿ ಎಂದರು.

ಇದಕ್ಕೆ ಕೊಂಚ ಆಕ್ರೋಶಗೊಂಡ ಸದಸ್ಯರು `ನಾನು ಇದ್ದ ವಿಷಯವನ್ನು ಹೇಳುತ್ತೇನೆ. ನಾನು ಯಾರನ್ನೂ ದೂರಿ ಮಾತನಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಎರಡೂ ತಂಡಗೊಳಗೆ ಮಾತಿನ ಚಕಮಕಿ, ವಾಕ್ಸಮರ, ಗೊಂದಲ ಉಂಟಾಯಿತು.

“ರಾಜ್ಯದಲ್ಲಿ ನಮ್ಮದೇ ಸರಕಾರವಿದೆ. ಆದರೆ ನಾವೇ ಪ್ರತಿಭಟನೆಗೆ ಇಳಿದು ಪೆಟ್ಟು ತಿನ್ನುವಂತಾಗಿದೆ. ಚುನಾವಣೆ ಬಂದಾಗ ಅಲ್ಪಸಂಖ್ಯಾತರ ಮತ ಕೇಳುವ ರಾಜಕೀಯ ನಾಯಕರಿಗೆ ಏಕೆ ನಮ್ಮ ನೋವು ಅರ್ಥ ಆಗ್ತಾ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಸಂಸದ ಬಿ ಇಬ್ರಾಹಿಂ, ಮಾಜಿ ಶಾಸಕ ಕೆ ಎಸ್ ಎಂ ಮಸೂದ್, ಜಿಲ್ಲಾ ಯೂತ್ ಕಾಂಗ್ರೆಸ್ ಕರ್ಯದರ್ಶಿ ಸುಹೇಲ್ ಕಂದಕ್ ಮೊದಲಾದವರಿದ್ದರು.