ಮೇಟಿ ಹಗರಣದಿಂದ ಕಾಂಗ್ರೆಸ್ ನಾಯಕರಲ್ಲಿ ತಳಮಳ ಆರಂಭ

ರಾಹುಲಗೆ 20 ಕಾಂಗ್ರೆಸ್ ಶಾಸಕರ ದೂರು

ಬೆಂಗಳೂರು : ಸೆಕ್ಸ್ ವೀಡಿಯೊ ಹಗರಣ ಅಬಕಾರಿ ಸಚಿವ  ಎಚ್ ವೈ ಮೇಟಿ ಅವರ ತಲೆದಂಡ ಪಡೆದ  ಘಟನೆ ನಡೆದಂದಿದನಿಂದ ರಾಜ್ಯದ ಕಾಂಗ್ರೆಸ್ ಪಕ್ಷ ನಾಯಕರಲ್ಲಿ ತಳಮಳ ಆರಂಭವಾಗಿದೆ. 2018ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಮುನ್ನ  ಪಕ್ಷದ ವರ್ಚಸ್ಸು ಇನ್ನಷ್ಟು ಕುಸಿಯದಂತೆ  ಕ್ರಮ ಕೈಗೊಳ್ಳುವಂತೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಪಕ್ಷದ ಪ್ರಮುಖರು ಒತ್ತಾಯಿಸುತ್ತಿದ್ದಾರೆ. ಮಾತ್ರವಲ್ಲ, 20 ಕಾಂಗ್ರೆಸ್ ಶಾಸಕರು ಪಕ್ಷದ ಕಾರ್ಯಾಧ್ಯಕ್ಷ ರಾಹುಲ್ ಗಾಂಧಿಗೆ ಈಗಾಗಲೇ ಪತ್ರ ಬರೆದು, ಸೀಎಂ ಸಿದ್ದರಾಮಯ್ಯ ತನ್ನ ಸುತ್ತ ಭ್ರಷ್ಟರ ಕೂಟ ರಚಿಸಿಕೊಂಡು ಪಕ್ಷದ ಇಮೇಜನ್ನು ಹಾಳುಗೆಡವುತ್ತಿದ್ದಾರೆಂದು ದೂರಿದ್ದಾರೆ.

ಮೇಟಿ ಸೆಕ್ಸ್ ಹಗರಣವನ್ನು ಬಯಲುಗೊಳಿಸಿರುವ ಆರ್ಟಿಐ ಕಾರ್ಯಕರ್ತ ರಾಜಶೇಖರ್ ತಾನು ಇನ್ನಿಬ್ಬರು ಸಚಿವರ ಹಗರಣಗಳನ್ನು ಮುಂದಿನ ದಿನಗಳಲ್ಲಿ ಬಯಲುಗೊಳಿಸುವುದಾಗಿ ಎಚ್ಚರಿಸಿರುವುದು ಪಕ್ಷ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದು  ಈ ಹಗರಣಗಳು ಬಹಿರಂಗಗೊಳ್ಳುವ ಮೊದಲೇ ತಪ್ಪಿತಸ್ಥ ಸಚಿವರುಗಳನ್ನು ಪತ್ತೆ ಹಚ್ಚಿ ಪಕ್ಷದಿಂದ ಉಚ್ಛಾಟಿಸಬೇಕೆಂಬ ಬೇಡಿಕೆ ಕೇಳಿಬಂದಿದೆ.

ಡಿಸೆಂಬರ್ 17ರಂದು ಬೆಳಗಾವಿಗೆ ಭೇಟಿ ನೀಡಲಿರುವ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಕಂಡು  ಮಾತನಾಡಲು ಹಲವು ಕಾಂಗ್ರೆಸ್ ಶಾಸಕರು ಸಿದ್ಧತೆ ನಡೆಸಿದ್ದಾರಲ್ಲದೆ ಅವರು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಕೂಡ ಭೇಟಿಯಾಗಿ ಪಕ್ಷದ ಸಭೆ ಕರೆದು ಈ ವಿಚಾರ ಚರ್ಚಿಸಬೇಕೆಂಬ ಬೇಡಿಕೆಯಿಡಲಿದ್ದಾರೆಂಬ ಬಗ್ಗೆ ಮಾಹಿತಿಯಿದೆ.

ಈ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೇಟಿಯನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆಯಿದ್ದು ಸಿಐಡಿ ತನಿಖಾ ವರದಿ ಹೊರಬಂದ ನಂತರ ಹೆಚ್ಚಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.