`ರಾಜಕೀಯ ಲಾಭ ಪಡೆದವರಿಂದ ಕಾಂಗ್ರೆಸ್ ನಾಯಕರ ತೇಜೋವಧೆ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜಕೀಯದ ಲಾಭ ಪಡೆದುಕೊಂಡವರು ಇದೀಗ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಸಚಿವರು ಮತ್ತು ನಮ್ಮ ನಾಯಕರ ತೇಜೋವಧೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಸಿಸಿಬಿ ಪೊಲೀಸರಿಂದ ಅಹ್ಮದ್ ಖುರೇಷಿ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಕೆಲವು ಮಂದಿ ಇದೀಗ ಸಚಿವರಾದ ರಮಾನಾಥ ರೈ ಮತ್ತು ಖಾದರ್ ಮತ್ತಿತರರ ತೇಜೋವಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದ ಕ ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮೊಹಮ್ಮದ್ ಪತ್ರಕರ್ತರೊಂದಿಗೆ ಮಾತನಾಡುತ್ತ ಹೇಳಿದರು.

“ಸಚಿವ ರಮಾನಾಥ ರೈ ಜಾತ್ಯತೀತ ನಾಯಕ. ಅಲ್ಪಸಂಖ್ಯಾತರ ಬಗ್ಗೆ ಅವರಿಗೆ ಅಪಾರವಾದ ಕಾಳಜಿ ಇದೆ. ಖಾದರ್ ಕೂಡಾ ಸಚಿವ ಸ್ಥಾನವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಆದರೆ ಇದನ್ನು ಸಹಿಸದ ಕೆಲವು ಮಂದಿ ಕೇವಲ ತಮ್ಮ ಸ್ವಾರ್ಥಕ್ಕೋಸ್ಕರ ಟೀಕಿಸುತ್ತಿದ್ದಾರೆ, ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ದೂರಿದರು.

“ಖುರೇಷಿ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ನೀಡಿದೆ. ಬಳಿಕ ಸತ್ಯಾಂಶ ಏನೆಂದು ಗೊತ್ತಾಗುತ್ತದೆ. ಖುರೇಷಿಯ ಆರೋಗ್ಯವನ್ನು ಸುಧಾರಿಸುವ ಬದಲು ಜಿಲ್ಲೆಯ ಶಾಂತಿ ಸಾಮರಸ್ಯವನ್ನು ಹಾಳುಗೆಡವಲು ಮುಂದಾಗಿರುವ ಇಂತಹ ಕಪಟ ನಾಯಕರ ಬೇಳೆ ಬೇಯದು” ಎಂದು ಹೇಳಿದರು.