ರಾಜ್ಯಸಭೆಯಲ್ಲಿ ತುಳು ಹಾಡಿನ ಗಮ್ಮತ್ತು

ನವದೆಹಲಿ : ರಾಜ್ಯಸಭೆ ಇತ್ತೀಚೆಗೆ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಗಾಯನ ಪ್ರತಿಭೆಗೆ ಸಾಕ್ಷಿಯಾಗಿತ್ತು. ಕರ್ನಾಟಕದ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಖಾಸಗಿ ಸದಸ್ಯರ ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ ಆಸ್ಕರ್ ಫೆರ್ನಾಂಡಿಸ್ ಪೂರ್ವಸಿದ್ಧತೆಯಿಲ್ಲದೆಯೇ ತುಳುವಿನ ಹಾಡೊಂದನ್ನು ಹಾಡಿದರು.

ತಮ್ಮ ಸಹಪಾಠಿ ಸಂಸದ ಮತ್ತು ಕನ್ನಡಿಗ ಜೈರಾಂ ರಮೇಶ್ ಅವರು ತಮ್ಮನ್ನು ತುಳುವಿನಲ್ಲೇ ಮಾತನಾಡುವಂತೆ ಪ್ರಚೋದಿಸಿದ್ದರು. ಆದರೆ ಮಾತನಾಡುವ ಬದಲಾಗಿ ಹಾಡನ್ನು ಹಾಡಲು ನಿರ್ಧರಿಸಿದೆ ಎಂದೂ ಅವರು ಹೇಳಿದರು.

ಕರ್ನಾಟಕದ ಉಡುಪಿ ಮೂಲದವರಾದ ಫೆರ್ನಾಂಡಿಸ್ ಈ ತುಳು ಹಾಡನ್ನು ತಮ್ಮ ಬಾಲ್ಯದಲ್ಲಿ ಹಾಡುತ್ತಿದ್ದುದನ್ನೂ ನೆನಪಿಸಿಕೊಂಡರು. ಈ ಹಾಡನ್ನು ಎಮ್ಮೆಗಳನ್ನು ಪಳಗಿಸಲು ಹಾಡಲಾಗುತ್ತಿತ್ತು. ಅವರ ಈ ಹಾಡು ರಮೇಶ್ ಮಾತ್ರವಲ್ಲ ಇತರ ಸಂಸದರ ಮೆಚ್ಚಿಗೆಗೂ ಪಾತ್ರವಾಯಿತು. ಆ ಸಂದರ್ಭದಲ್ಲಿ ಸಭಾಧ್ಯಕ್ಷರಾಗಿದ್ದ ಸುಖೇಂದು ಶೇಖರ್ ರಾಯ್ ಅವರೂ ಹಾಡಿಗೆ ಪ್ರಶಂಸೆ ಸೂಚಿಸಿದರು. “ನೀವು ಸಾಮಾನ್ಯ ಗಾಯಕರಂತೆಯೇ ಹಾಡಿದ್ದೀರಿ” ಎಂದು ರಾಯ್ ಹೇಳಿದ್ದರು.