ಕಸ್ತೂರಿರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸಂಪುಟ

ಬೆಂಗಳೂರು : ಕರ್ನಾಟಕ ಸಚಿವ ಸಂಪುಟ ನಿನ್ನೆ ಪಶ್ಚಿಮ ಘಟ್ಟಕ್ಕೆ ಸಂಬಂಧಪಟ್ಟ ಕಸ್ತೂರಿರಂಗನ್ ವರದಿಯ ಶಿಫಾರಸು ತಿರಸ್ಕರಿಸಿ ಈ ಬಗ್ಗೆ ಕೇಂದ್ರಕ್ಕೆ ಮನದಟ್ಟು ಮಾಡಲು ನಿರ್ಧರಿಸಿತು.

ವರದಿ ಶಿಫಾರಸಿನಲ್ಲಿ ಪಶ್ಚಿಮ ಘಟ್ಟದ 1,592 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‍ಎ)ವೆಂದು ಗುರುತಿಸಲಾಗಿರುವುದರ ವಿರುದ್ಧ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದರು. ವರದಿಯು ತಮ್ಮ ಜೀವನಕ್ಕೆ ಮತ್ತು ಪ್ರದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಸಚಿವ ವಿವರಿಸಿದರು.

ಪಶ್ಚಿಮ ಘಟ್ಟಕ್ಕೆ ಸೇರಿರುವ 11 ಜಿಲ್ಲೆಗಳ 20,668 ಚದರ ಕಿ ಮೀ ಪ್ರದೇಶವನ್ನು ಇಎಸ್‍ಎ ಎಂದು ಘೋಷಿಸುವಲ್ಲಿ ರಾಜ್ಯ ಸರ್ಕಾರದ ಆಕ್ಷೇಪಗಳಿವೆಯೇ ಎಂದು ಫೆಬ್ರವರಿಯಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕೇಳಿತ್ತು.

ಜನಸಂಖ್ಯೆ ಪ್ರದೇಶ, ಕೃಷಿ ಭೂಮಿ ಮತ್ತು ಮರಮಟ್ಟುಗಳಿರುವ ಪ್ರದೇಶವನ್ನು ಇಎಸ್‍ಎಯಿಂದ ಹೊರಗಿಡುವಂತೆ ಬಹಳ ಹಿಂದೆಯೇ ರಾಜ್ಯ ಸರ್ಕಾರವು ಕೇಂದ್ರವನ್ನು ಕೇಳಿಕೊಂಡಿತ್ತು. ಆದರೆ ಈ ಬಾರಿ ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿತು.

“ಪಶ್ಚಿಮ ಘಟ್ಟದ ಅರಣ್ಯಗಳು, ಡೀಮ್ಡ್ ಅರಣ್ಯಗಳು, ವನ್ಯಜೀವಿ ಧಾಮಗಳು ಮತ್ತು ರಕ್ಷಿತ ಪ್ರದೇಶದ ಸುರಕ್ಷತೆಗೆ ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ಅನುಸರಿಸಿದೆ” ಎಂದು ಕೇಂದ್ರಕ್ಕೆ ಜಯಚಂದ್ರ ವಿವರಿಸಿದ್ದಾರೆ.